“ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು, ಮನುಕುಲದ ಆರೋಗ್ಯ ಸುಧಾರಿಸಲು ಹಾಗೂ ಸಂತಾನಶಕ್ತಿ ಹೆಚ್ಚಿಸಲು ಸಿರಿಧಾನ್ಯಗಳ ಬಳಕೆಯೊಂದೇ ಶಾಶ್ವತ ಪರಿಹಾರ,” ಎಂದು ಖ್ಯಾತ ಆಹಾರ ತಜ್ಞ ಡಾ. ಖಾದರ್ ವಲಿ ಪ್ರತಿಪಾದಿಸಿದರು.
ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜೀತೊ) ಹೊಸಪೇಟೆ ಘಟಕದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ‘ಸಿರಿಧಾನ್ಯದೊಂದಿಗೆ ಸ್ಮಾರ್ಟ್ ಪೌಷ್ಟಿಕಾಂಶ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಾಂಸಾಹಾರ ಸೇವನೆಯು ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ. ಒಂದು ಕೆ.ಜಿ. ಮಾಂಸಕ್ಕಾಗಿ ಸುಮಾರು 8 ಎಕರೆ ಅರಣ್ಯ ನಾಶವಾಗುತ್ತಿದೆ. ಸಿರಿಧಾನ್ಯ ಬೆಳೆಯುವುದು ಮತ್ತು ಸೇವಿಸುವುದು ಪರಿಸರಕ್ಕೆ ಪೂರಕವಾದ ‘ಅಹಿಂಸಾ ವಿಧಾನ’ವಾಗಿದೆ.
ಅಕ್ಕಿ, ಗೋಧಿ, ಮಾಂಸಾಹಾರ ಮತ್ತು ಹಾಲಿನ ಸೇವನೆಯನ್ನು ಕಡಿಮೆ ಮಾಡುವುದು ಮನುಕುಲದ ಹಿತದೃಷ್ಟಿಯಿಂದ ಅತ್ಯಗತ್ಯ. ಪ್ಲಾಸ್ಟಿಕ್ ಬಾಟಲಿ ನೀರು ಹಾಗೂ ಪ್ಯಾಕೇಜ್ಡ್ ಆಹಾರಗಳಿಂದ ದೂರವಿರಬೇಕು.ಪ್ರಸ್ತುತ ಆಸ್ಪತ್ರೆಗಳು ಕಾಯಿಲೆಗಳನ್ನು ಗುಣಪಡಿಸುವ ಬದಲು ಕೇವಲ ನಿರ್ವಹಣೆ ಮಾಡುತ್ತಿವೆ. ಮಧುಮೇಹದಂತಹ ಕಾಯಿಲೆಗಳು ಇಂದು ಬಿಲಿಯನ್ ಡಾಲರ್ ವ್ಯವಹಾರವಾಗಿ ಮಾರ್ಪಟ್ಟಿವೆ. ಆದರೆ, ಸಿರಿಧಾನ್ಯಗಳ ಬಳಕೆಯಿಂದ ಮಧುಮೇಹದಂತಹ ದೀರ್ಘಕಾಲೀನ ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.ನಮ್ಮ ಅಡುಗೆ ಮನೆಯಲ್ಲಿರುವ ನೈಸರ್ಗಿಕ ಪದಾರ್ಥಗಳೇ ನಿಜವಾದ ಆರೋಗ್ಯ ವರ್ಧಕಗಳು. ರಾಸಾಯನಿಕಯುಕ್ತ ಆಹಾರಗಳ ಬದಲಿಗೆ ಇವುಗಳ ಬಳಕೆಗೆ ಹೆಚ್ಚಿನ ಗಮನ ನೀಡಬೇಕು.ಕಾರ್ಯಕ್ರಮದ ಆರಂಭದಲ್ಲಿ ಜೀತೊ ಟ್ರಸ್ಟ್ ಅಧ್ಯಕ್ಷ ಹಿತೇಶ್ ಬಗ್ರೇಚಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಮನೋಜ್ ಕುಮಾರ್ ಜೈನ್ ಸಿರಿಧಾನ್ಯಗಳ ಮಹತ್ವವನ್ನು ವಿವರಿಸಿದರು. ಪ್ರಿಯದರ್ಶಿನಿ ಹೋಟೆಲ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರಾವ್ ಮಾತನಾಡಿ, ಪ್ರಸ್ತುತ ಜಾಗತಿಕ ಯುದ್ಧದ ಸನ್ನಿವೇಶದಲ್ಲಿ ಇಂಧನ ಉಳಿತಾಯ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಿರಿಧಾನ್ಯಗಳ ಆರೋಗ್ಯಕರ ಬಳಕೆಯ ಕುರಿತು ಮಾಹಿತಿ ಪಡೆದರು.

