ಬಳ್ಳಾರಿ:
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಬಳ್ಳಾರಿ ಜಿಲ್ಲೆಯ ವಿವಿಧ ರೈಲ್ವೆ ಯೋಜನೆಗಳ ಅನುಷ್ಠಾನ ಮತ್ತು ರೈಲುಗಳ ಸಂಚಾರ ಪುನರಾರಂಭಿಸುವಂತೆ ಒತ್ತಾಯಿಸಿ ಶನಿವಾರ ಸಂಸದ ಈ. ತುಕಾರಾಂ ಅವರನ್ನು ಭೇಟಿ ಮಾಡಿ ಸವಿಸ್ತಾರವಾದ ಮನವಿ ಪತ್ರ ಸಲ್ಲಿಸಿತು. ಕೆ.ಎಂ. ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸುಮಾರು ಒಂದು ಗಂಟೆ ಕಾಲ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಲಾಯಿತು.ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ನಿತ್ಯ ಬೆಳಿಗ್ಗೆ ಸಂಚರಿಸುವಂತೆ ‘ವಂದೇ ಭಾರತ್’ ಅಥವಾ ಇಂಟರ್‌ಸಿಟಿ ರೈಲನ್ನು ಪ್ರಾರಂಭಿಸಬೇಕು.ಈ ಹಿಂದೆ ಸಂಚರಿಸುತ್ತಿದ್ದ ಕೊಲ್ಹಾಪುರ-ಮುನಗೂರು ಮತ್ತು ಶಿವಮೊಗ್ಗ-ಚೆನ್ನೈ ರೈಲುಗಳನ್ನು ಪುನಃ ಆರಂಭಿಸಬೇಕು.
ಬಳ್ಳಾರಿಯ ಬೈಪಾಸ್ ರೈಲ್ವೆ ನಿಲ್ದಾಣವನ್ನು ಕಾರ್ಯಗತಗೊಳಿಸಿ, ಮೈಸೂರು-ಅಜ್ಮೀರ್ ರೈಲು ಬಳ್ಳಾರಿ-ಹೊಸಪೇಟೆ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು.ಬಳ್ಳಾರಿ-ಸಿರುಗುಪ್ಪ ಮತ್ತು ಸಿಂಧನೂರು ನೂತನ ರೈಲ್ವೆ ಮಾರ್ಗಗಳನ್ನು ಶೀಘ್ರವಾಗಿ ಆರಂಭಿಸಬೇಕು ಹಾಗೂ ಹಗರಿ ಆಧುನಿ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಬೇಕು.
ಬಳ್ಳಾರಿ ನಗರದ ಸಂಚಾರ ದಟ್ಟಣೆ ನಿವಾರಣೆಗೆ ಪೂರಕವಾದ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸುಧಾ ಕ್ರಾಸ್ ರೈಲ್ವೆ ಬ್ರಿಡ್ಜ್ ಹಾಗೂ ರೇಡಿಯೋಪಾರ್ಕ್ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮತ್ತು ಬಳ್ಳಾರಿ ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿ ಕುರಿತು ಸಮಿತಿಯು ಸಂಸದರ ಗಮನ ಸೆಳೆಯಿತು.
ಮನವಿ ಆಲಿಸಿದ ಸಂಸದ ಈ. ತುಕಾರಾಂ ಅವರು ಮಾತನಾಡಿ, “ಸುಧಾ ಕ್ರಾಸ್ ಮತ್ತು ರೇಡಿಯೋಪಾರ್ಕ್ ಮೇಲ್ಸೇತುವೆ ಕಾಮಗಾರಿಗಳಿಗೆ ಇದ್ದ ಅಡೆತಡೆಗಳು ಈಗ ನಿವಾರಣೆಯಾಗಿವೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ,” ಎಂದು ಭರವಸೆ ನೀಡಿದರು. ಅಲ್ಲದೆ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ರೈಲುಗಳ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಪಿ. ಯೋಗಿರಾಜ್, ಕುಪಗಲ್ ವೀರೇಶ್, ಪಿ. ಬಂಡೇಗೌಡ, ಎಚ್.ಕೆ. ಗೌರಿಶಂಕರ್, ಕೆ.ಎಂ. ಉಮಾಪತಿಗೌಡ, ಬಿ.ಎಂ. ಎರ್ರಿಸ್ವಾಮಿ, ಸಿಂಧುವಾಳ ಮಹೇಶ್ ಗೌಡ, ಎ.ಪಿ. ಉಮೇಶ್, ಬಸವರಾಜ್, ಶ್ರೀಧರಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *