ಮುದ್ದೇಬಿಹಾಳ: ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಆರಾಧ್ಯ ದೈವಗಳಾದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಕಾಡಸಿದ್ಧೇಶ್ವರರ ಜಾತ್ರಾ ಮಹೋತ್ಸವವು ಮಾರ್ಚ್ 20ರಿಂದ 22ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಾಜಸೇವಕ ಹಾಗೂ ಅಹಲ್ಯಾಬಾಯಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ತಿಳಿಸಿದ್ದಾರೆ.

ಪಟ್ಟಣದ ಅಹಲ್ಯಾಬಾಯಿ ಹೋಳ್ಕರ್ ಬ್ಯಾಂಕ್‌ನ ಪಲ್ಲವಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 21 ವರ್ಷಗಳಿಂದ ಸುರಪುರ ತಾಲ್ಲೂಕಿನ ಮಾರನಾಳದ ಭೀರಪ್ಪ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಬಾರಿಯೂ ಯುಗಾದಿ ಹಬ್ಬದ ಅಂಗವಾಗಿ ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೆರವಾಗುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 21 ಜೋಡಿಗಳು ನೋಂದಾಯಿಸಿಕೊಂಡಿವೆ ಎಂದು ಹೇಳಿದರು.

ಮಾರ್ಚ್ 20ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಹುಲಿಗೇಮ್ಮದೇವಿ ದೇವಸ್ಥಾನದಿಂದ 9 ಪಲ್ಲಕ್ಕಿಗಳ ಮೆರವಣಿಗೆ ಆರಂಭವಾಗಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಸಾಗಲಿದೆ. ಕುಂಭ ಹಾಗೂ ಡೊಳ್ಳಿನ ನಾದದೊಂದಿಗೆ ನಡೆಯುವ ಈ ಮೆರವಣಿಗೆ ಜಾತ್ರೆಗೆ ಚಾಲನೆ ನೀಡಲಿದೆ. ಅಂದೇ ರಾತ್ರಿ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗಲಿದೆ.

ಮಾರ್ಚ್ 21ರಂದು ಮಧ್ಯಾಹ್ನ 12 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಭೆ ನಡೆಯಲಿದ್ದು, ಕಾರ್ಯಕ್ರಮವನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಶಾಸಕರಾದ ಸಿ.ಎಸ್. ನಾಡಗೌಡ ಉದ್ಘಾಟಿಸಲಿದ್ದಾರೆ. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ (ನಡಹಳ್ಳಿ), ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಂಗಾಧರ ಎಸ್. ನಾಡಗೌಡ ಹಾಗೂ ಕಾಂಗ್ರೆಸ್ ಮುಖಂಡ ಶಾಂತಗೌಡ ಎಸ್. ಪಾಟೀಲ ಜ್ಯೋತಿ ಬೆಳಗಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಸ್. ಪೂಜಾರಿ ವಹಿಸಲಿದ್ದಾರೆ.

ಜಾತ್ರೆಯ ಅಂಗವಾಗಿ ಆಗತೀರ್ಥ ಶ್ರೀ ರೇವಣಸಿದ್ದೇಶ್ವರ ಮಹಾಸ್ವಾಮೀಜಿ, ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮೀಜಿ, ಸಿದ್ದನಕೊಳ್ಳದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ತಾಳಿಕೋಟೆಯ ಖಾಸಗತೇಶ್ವರ ಮಠದ ಶ್ರೀ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಸೇರಿದಂತೆ ಅನೇಕ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಜಾತ್ರೆಯಲ್ಲಿ ಟಗರಿನ ಕಾಳಗ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ನಡೆಯಲಿದ್ದು, ಮಾರ್ಚ್ 22ರಂದು ಬೆಳಿಗ್ಗೆ ರಂಗೋಲಿ ಸ್ಪರ್ಧೆ, ಮಧ್ಯಾಹ್ನ ತೆರಬಂಡಿ ಸ್ಪರ್ಧೆ ಹಾಗೂ ಸಂಜೆ ಖೋ-ಖೋ ಪಂದ್ಯಾವಳಿ ನಡೆಯಲಿದೆ. ವಿಜೇತರಿಗೆ ಬಹುಮಾನಗಳನ್ನು ನೀಡಲಾಗುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ವಾಯ್.ಎಚ್. ವಿಜಯಕರ ಅವರು ಮಲ್ಲಿಕಾರ್ಜುನ ಮದರಿ ಅವರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಲ್ಲಣ್ಣ ಕೆಶರಟ್ಟಿ, ಬಿ.ಎಸ್. ಶಿರೋಳ, ಬಸವರಾಜ ಬಿಜೂರ, ಶಿಶಿ ನೆರಬೆಂಚಿ, ಬಸವರಾಜ ಗುಡಲಮನಿ, ಚಂದ್ರು ಜೋಗಿ, ಚಂದ್ರು ಗಣಾಚಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *