ಮುದ್ದೇಬಿಹಾಳ: ತಾಳಿಕೋಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣ ವಿಚಾರವಾಗಿ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಶಾಸಕ ಸಿ.ಎಸ್. ನಾಡಗೌಡ ಅವರು ವಿರೋಧ ಪಕ್ಷದ ನಾಯಕರ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಸೌಧ ನಿರ್ಮಾಣಕ್ಕಾಗಿ ಮಂಜೂರಾದ ಅನುದಾನ ಹಿಂತಿರುಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಸರ್ಕಾರವೇ ತ್ವರಿತವಾಗಿ ಜಾಗ ಗುರುತಿಸಲು ಸೂಚನೆ ನೀಡಿತ್ತು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಪ್ರಭುಗೌಡ ಮದರಕಲ್ ಸೇರಿದಂತೆ ಕೆಲವರು ಎರಡು ಎಕರೆ ಜಮೀನು ದಾನವಾಗಿ ನೀಡಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಪಿಡಬ್ಲ್ಯೂಡಿ ಮತ್ತು ಕೆಇಬಿ ಇಲಾಖೆಗಳು ಜಾಗ ನೀಡಲು ಸಾಧ್ಯವಿಲ್ಲವೆಂದು ತಿಳಿಸಿದ ಕಾರಣ, ದಾನಿಗಳ ಸಹಕಾರದೊಂದಿಗೆ ಸರ್ಕಾರದ ನಿಯಮಾನುಸಾರವಾಗಿ ನಿರ್ಮಾಣ ಕಾರ್ಯ ಮುಂದುವರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಕೆಲವರು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾವು ಶಾಸಕರಾಗಿ ಆಯ್ಕೆಯಾದ ಬಳಿಕವೇ ಪ್ರಜಾಸೌಧ ನಿರ್ಮಾಣದ ಪ್ರಕ್ರಿಯೆ ಆರಂಭಿಸಿದ್ದಾಗಿ ತಿಳಿಸಿದ ಅವರು, ಎರಡನೇ ತಿಂಗಳಲ್ಲೇ ಜಾಗ ಗುರುತಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದರು. ಕೆಲವು ಕಾರಣಗಳಿಂದ ವಿಳಂಬವಾದರೂ, ಇದೀಗ ಮೈಲೇಶ್ವರ ರಸ್ತೆಯಲ್ಲಿರುವ ಸ್ಥಳವನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.

ಹಳೆಯ ಅವಿಭಜಿತ ತಾಲ್ಲೂಕಿನ ಕಾಲದಲ್ಲಿ ಜನರು ದೂರ ಪ್ರಯಾಣಿಸಿ ಕೆಲಸಗಳನ್ನು ಮುಗಿಸುತ್ತಿದ್ದರು. ಈಗ ಕೆಲವೇ ಕಿಲೋಮೀಟರ್ ದೂರದ ವಿಚಾರವನ್ನು ದೊಡ್ಡದಾಗಿ ಮಾಡುವುದು ಸಮಂಜಸವಲ್ಲ ಎಂದು ಟೀಕಿಸಿದರು.

ಇದೇ ವೇಳೆ ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. “ಐದು ವರ್ಷಗಳಲ್ಲಿ ಜಾಗ ಗುರುತಿಸಲು ಅಗತ್ಯ ಇಚ್ಛಾಶಕ್ತಿ ತೋರಿಸಲಿಲ್ಲ. ನಮ್ಮ ಮನೆಗೆ ಬಂದು ಗೌರವದಿಂದ ವರ್ತಿಸಿದ್ದ ವಿಚಾರವನ್ನೂ ಮರೆತಂತಿದೆ” ಎಂದು ಕಟುವಾಗಿ ಪ್ರತಿಕ್ರಿಯಿಸಿದರು.

ಆಸ್ತಿ ಸಂಬಂಧಿತ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಆರೋಪಗಳಿಗೆ ದಾಖಲೆಗಳನ್ನು ನೀಡಲು ಸವಾಲು ಹಾಕಿದರು. ಆಧಾರರಹಿತ ಆರೋಪಗಳನ್ನು ಮುಂದುವರಿಸಿದರೆ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.

ಪ್ರಜಾಸೌಧ ನಿರ್ಮಾಣಕ್ಕಾಗಿ ಒಂದೇ ಸ್ಥಳದ ಮೇಲೆ ಹಠವಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಯಾರಾದರೂ ಉಚಿತವಾಗಿ ಜಮೀನು ನೀಡಲು ಮುಂದಾದರೆ ಸ್ಥಳ ಬದಲಾವಣೆಯನ್ನೂ ಪರಿಗಣಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕ ಜೀವನದಲ್ಲಿ ಶಿಷ್ಟಾಚಾರ ಕಾಪಾಡಿಕೊಳ್ಳಬೇಕು. ವೈಯಕ್ತಿಕ ಟೀಕೆಗಳ ಬದಲು ಜನಪರ ವಿಚಾರಗಳತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗುರು ತಾರನಾಳ, ಮಹೆಬೂಬ ಗೊಳಸಂಗಿ, ವೈ.ಎಚ್. ವಿಜಯಕರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *