ಉದ್ಯೋಗಾಕಾಂಕ್ಷಿಗಳು ತಮ್ಮ ಶಿಕ್ಷಣದ ಜತೆಗೆ ತಾಂತ್ರಿಕ ಕೌಶಲ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಯಾರು ಹೆಚ್ಚು ಓದಿಕೊಂಡಿರುತ್ತಾರೆ ಅವರು ಮಾತ್ರ ಬುದ್ದಿವಂತರು ಎಂದು ಒಂದು ಕಾಲದಲ್ಲಿ ಹೇಳಲಾಗುತ್ತಿತ್ತು. ಆದರೆ, ಈಗ ಅದು ಬದಲಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾಭ್ಯಾಸ, ಜ್ಞಾನದ ಜೊತೆಗೆ ಕೌಶಲ್ಯ ಮತ್ತು ಮನೋಭಾವ ಬಹಳ ಮುಖ್ಯವಾಗಿದೆ” ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹೇಳಿದರು.

ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಡಿಯು-ಜಿಕೆವೈ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ತಾಂತ್ರಿಕ ಕೌಶಲ್ಯವನ್ನು ಹೊಂದಿರುವವರು ಕಾರ್ಖಾನೆಗಳಲ್ಲಿ, ಖಾಸಗಿ ಅಥವಾ ಸರ್ಕಾರಿ ವಲಯಗಳಲ್ಲಿ ಸುಲಭವಾಗಿ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ತರಬೇತಿಗಳು ಅತ್ಯವಶ್ಯಕವಾಗಿರುವುದರಿಂದ ಸರ್ಕಾರಗಳು ಹಲವಾರು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿವೆ” ಎಂದರು.

“ಕೌಶಲಾಭಿವೃದ್ಧಿ ತರಬೇತಿಯ ಸದ್ಬಳಕೆಯನ್ನು ಮಾಡಿಕೊಳ್ಳಲು ವಿದ್ಯಾರ್ಥಿಗಳು, ಯುವ ಜನತೆ ಮುಂದೆ ಬರಬೇಕು. ಭಾರತದಲ್ಲಿ ಪದವಿ ಪೂರ್ಣಗೊಳಿಸಿದವರಲ್ಲಿ ಶೇ. 50ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಬಹಳಷ್ಟು ಜನ ನಿರುದ್ಯೋಗಿಗಳಾಗಿ ಉಳಿಯುತ್ತಿದ್ದಾರೆ” ಎಂದು ಹೇಳಿದರು.

“ಈ ಹಿನ್ನೆಲೆಯಲ್ಲಿ ನ್ಯಾಷ್ನಲ್ ಸ್ಕಿಲ್ ಕ್ವಾಲಿಫಿಕೇಶನ್ ಫ್ರೇಮ್‌ವರ್ಕ್ (ಎನ್.ಎಸ್.ಕ್ಯೂ.ಎಫ್) ಮೂಲಕ ನ್ಯಾಷ್ನಲ್ ಸ್ಕಿಲ್ ಡೆವಲೆಪ್ಮೆಂಟ್ ಕೌನ್ಸಿಲ್ ರವರು ಸುಮಾರು 8 ಹಂತಗಳಲ್ಲಿ ವೃತ್ತಿಪರ ತರಬೇತಿಯನ್ನು ನೀಡುತ್ತಾರೆ. ಇದರಿಂದ ಶಾಲಾ ಶಿಕ್ಷಣದೊಂದಿಗೆ ತಾಂತ್ರಿಕ ಕೌಶಲ್ಯಗಳನ್ನು ಜೋಡಿಸಿ, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಕಲಿಕೆಯಲ್ಲಿ ನಮ್ಯತೆಯನ್ನು ಒದಗಿಸಲು ಸಹಾಯವಾಗುತ್ತದೆ” ಎಂದು ವಿವರಿಸಿದರು.

“ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಇದರಲ್ಲಿ ನೋಂದಾಯಿಸಿಕೊಂಡು ತರಬೇತಿ ಪಡೆದು ಪ್ರಮಾಣ ಪತ್ರ ಪಡೆದುಕೊಂಡಲ್ಲಿ ನಿಮಗೆ ಸುಲಭವಾಗಿ ಉದ್ಯೋಗವನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಕೊಪ್ಪಳ ಜಿಲ್ಲೆಯ ತಳಕಲ್‌ನಲ್ಲಿ ವಿಟಿಯು ಬಹು ಕೌಶಲ್ಯ ಕೇಂದ್ರವಿದ್ದು, ವಿವಿಧ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ” ಎಂದು ಹೇಳಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಭಿವೃದ್ಧಿ ಅಧಿಕಾರಿ ಕೆ.ಗವಿಶಂಕರ್ ಮಾತನಾಡಿ, “ಉದ್ಯೋಗ ಮೇಳದಲ್ಲಿ ಸುಮಾರು 61ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿವೆ. ಉದ್ಯೋಗಕ್ಕಾಗಿ ಎರಡು ಸಾವಿರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದು, ಸುಮಾರು 300ಕ್ಕೂ ಹೆಚ್ಚು ಉದ್ಯೋಗಾಕಾಂಗಶಿಗಳು ಭಾಗವಹಿಸಿದ್ದಾರೆ” ಎಂದರು.

“ಯಾವುದೇ ವಿದ್ಯಾರ್ಹತೆ ಇರಲ್ಲಿ ಎಲ್ಲರೂ ತಮ್ಮ ಕೌಶಲ್ಯಾಧಾರಿತ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಳ್ಳಬೇಕು. ಉದ್ಯೋಗಾಕಾಂಕ್ಷೆ ಹೊಂದಿರುವ ಯುವಕರು ಇಂತಹ ಮೇಳಗಳಲ್ಲಿ ಭಾಗವಹಿಸಿ, ಉದ್ಯೋಗದ ನೆರವು ಪಡೆದುಕೊಳ್ಳಬೇಕು. ಉದ್ಯೋಗಾಕಾಂಕ್ಷಿಗಳು, ಈ ಮೇಳದಲ್ಲಿ ಬಂದಿರುವ ಎಲ್ಲಾ ಕಂಪನಿಗಳಿಗೆ ಸಂದರ್ಶನ ನೀಡಿ, ನಿಮಗೆ ಸಮಂಜಸ ಎನಿಸುವ ಕಂಪನಿಯನ್ನು ಆಯ್ಕೆ ಮಾಡಿಕೊಂಡು, ಸಂದರ್ಶನ ನೀಡಬೇಕು” ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *