ಬಾಗಲಕೋಟೆ : ತಾಲೂಕಿನ ಬೆನಕಟ್ಟಿ, ಮನ್ನಿಕಟ್ಟಿ, ಹಳ್ಳೂರ, ಭಗವತಿ ಸೇರಿದಂತೆ ವಿವಿಧೆಡೆ ಮಂಗಳವಾರ ಸಂಜೆ ಆಲಿಕಲ್ಲು ಸಮೇತ ಪೂರ್ವ ಮುಂಗಾರು ಮಳೆ ಅಬ್ಬರಿಸಿದೆ. ಸಾಮಾನ್ಯವಾಗಿ ಯುಗಾದಿ ಬಳಿಕ ಶುರುವಾಗುತ್ತಿದ್ದ ಪೂರ್ವ ಮುಂಗಾರು ಮಳೆ ಈ ಸಲ ಯುಗಾದಿ ಹಬ್ಬಕ್ಕೂ ಮುನ್ನವೇ ಆಗಮಿಸಿದ್ದು ರೈತರನ್ನು ಕಂಗಾಲು ಆಗುವಂತೆ ಮಾಡಿದೆ.ಸದ್ಯ ರೈತರು ಹಿಂಗಾರಿನ ಬಿಳಿಜೋಳ, ಕಡಲೆ, ಗೋಽ ರಾಶಿ ಮಾಡುತ್ತಿದ್ದಾರೆ. ಸಾಕಷ್ಟು ರೈತರು ಕಟಾವು ಮಾಡಿದ್ದು, ಹಲವರು ಇನ್ನು ಕಟಾವು ಹಂತದಲ್ಲಿ ಇದ್ದಾರೆ. ಇದೀಗ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಮಳೆಯ ಜೊತೆಗೆ ಭಾರಿ ಪ್ರಮಾಣದಲ್ಲಿ ಆಲಿಕಲ್ಲುಗಳು ಬಿದ್ದಿದ್ದು, ರಾಶಿ ಮಾಡುವ ಬೆಳೆಗಳು ಹಾನಿಯಾಗಲಿವೆ ಎಂದು ರೈತರು ಕಂಗಾಲಾಗಿದ್ದಾರೆ.ಪ್ರಸಕ್ತ ವರ್ಷ ಬಿಳಿಜೋಳದ ಗಣಕಿಗೆ ಹೆಚ್ಚಿನ ಬೇಡಿಕೆ ಇದ್ದು, ರೊಟ್ಟಿಗೆ ಜೋಳ ಮತ್ತು ದನಕರುಗಳಿಗೆ ಮೇವು ಆಗುತ್ತಿದೆ ಎನ್ನುವ ವಿಶ್ವಾಸದಲ್ಲಿ ಇದ್ದ ರೈತರಿಗೆ ಇದೀಗ ಆಲಿಕಲ್ಲು ಹೊಡೆತ ನೀಡಿದೆ. ಮಂಗಳವಾರ ಸಂಜೆ ಬಾಗಲಕೋಟೆ ನಗರ ಸೇರಿದಂತೆ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಗಾಳಿ ಬೀಸಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ಕಂಡು ಬಂದಿತು. ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಹೊಸೂರ ಗ್ರಾಮದಲ್ಲಿ ತಾತ್ಕಾಲಿಕವಾಗಿ ಹಾಕಿದ್ದ ಚೆಕ್ ಪೋಸ್ಟ್ನ ಭಾರಿ ಗಾಳಿಗೆ ಹಾರಿ ಹೋಗಿದೆ. ಇದರಿಂದ ಸಿಬ್ಬಂದಿ ಪರದಾಡುವಂತಾಯಿತು. ಬೆನಕಟ್ಟಿ, ಹಳ್ಳೂರ, ಭಗವತಿ, ಮನ್ನಿಕಟ್ಟಿ ಭಾಗದಲ್ಲಿ ಮಳೆ ಹಾಗೂ ಆಲಿಕಲ್ಲು ಸುರಿದಿರುವ ವರದಿಯಾಗಿದೆ. ಬೆನಕಟ್ಟಿ ಗ್ರಾಮದಲ್ಲಂತೂ ರಸ್ತೆ ತುಂಬ ಆಲಿಕಲ್ಲು ರಾಶಿಯೇ ಕಂಡು ಬಂದಿತು.====== ಕೋಟ್…ಸದ್ಯ ಹಿಂಗಾರು ಹಂಗಾಮಿನ ಕಡಲೆ, ಜೋಳ, ಗೋಽ ರಾಶಿ ಭರಪೂರ ನಡೆದಿದೆ. ಮಂಗಳವಾರ ಸಂಜೆ ಬೀಸಿದ ಭಾರಿ ಗಾಳಿ, ಮಳೆ ಮತ್ತು ಅಪಾರ ಪ್ರಮಾಣದ ಆಲಿಕಲ್ಲು ಬಿದ್ದು ಬೆಳೆಗಳು ಸಂಪೂರ್ಣ ಹಾಳಾಗಿವೆ. ಜಾನುವಾರುಗಳಿಗೆ ವರ್ಷಗಟ್ಟಲೇ ಮೇಯಿಸುವ ಹೊಟ್ಟು ಮತ್ತು ಜೋಳದ ಕಣಿಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು. ಬೆಳೆ ಹಾಗೂ ಮೇವು ಹಾನಿಯ ಬಗ್ಗೆ ತಕ್ಷಣವೇ ಸರ್ವೆ ಮಾಡಿಸಿ, ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕೊಡಬೇಕು. ಹಾಗೂ ಜಾನುವಾರುಗಳಿಗೆ ಮೇವಿನ ಪೂರೈಕೆ ಮಾಡಬೇಕು.-ರಂಗಣ್ಣ ಬೆಣ್ಣೂರರೈತರು, ಬೆನಕಟ್ಟಿ ಗ್ರಾಮ.

