ವಿಶ್ವ ಕಿಡ್ನಿ ದಿನದ ಅಂಗವಾಗಿ ಚಿರಾಯು ಆಸ್ಪತ್ರೆಯಿಂದ ನಗರದಲ್ಲಿ ಗುರುವಾರ ವಾಕಥಾನ್ ನಡೆಯಿತು.ಎಲ್ಲರಿಗೂ ಕಿಡ್ನಿ ಆರೋಗ್ಯ-ಜನರ ಕಾಳಜಿ, ಭೂಮಿಯ ರಕ್ಷಣೆ’ ಘೋಷ ವಾಕ್ಯದಡಿ ನಡೆದ ವಾಕಥಾನ್‌ನಲ್ಲಿ ಚಿರಾಯು ಆಸ್ಪತ್ರೆಯ ವೈದ್ಯರು-ಸಿಬ್ಬಂದಿ, ಎಚ್‌ಕೆಇ ಸಂಸ್ಥೆಯ ನರ್ಸಿಂಗ್ ಕಾಲೇಜು ಸೇರಿದಂತೆ ವಿವಿಧ ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆಹಾಕಿದರು.ಚಿರಾಯು ಆಸ್ಪತ್ರೆಯಿಂದ ಆರಂಭವಾದ ವಾಕಥಾನ್ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಿಲ್ಲಾಡಳಿತ ಭವನ, ಎಸ್.ಬಿ.ಪೆಟ್ರೋಲ್ ಬಂಕ್ ಮೂಲಕ ಜಗತ್ ವೃತ್ತ ತಲುಪಿತು. ಬಳಿಕ ಅಲ್ಲಿಂದ ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್, ಎಸ್.ಬಿ.ಪೆಟ್ರೊಲ್ ಬಂಕ್ ಮೂಲಕ ಮರಳಿ ಚಿರಾಯು ಆಸ್ಪತ್ರೆ ತಲುಪಿತು. ನಾಲ್ಕು ಕಿ.ಮೀಗೂ ಹೆಚ್ಚು ನಡೆದ ವಾಕಥಾನ್‌ನಲ್ಲಿ ವಿದ್ಯಾರ್ಥಿಗಳು ‘ಕಿಡ್ನಿ ಆರೋಗ್ಯ’ದ ಕುರಿತ ತರಹೇವಾರಿ ಭಿತ್ತಿ ಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು. ಘೋಷಣೆಗಳನ್ನೂ ಮೊಳಗಿಸಿದರು.
ಈ ವೇಳೆ ಮಾತನಾಡಿದ ಚಿರಾಯು ಆಸ್ಪತ್ರೆ ಮುಖ್ಯಸ್ಥರೂ ಆಗಿರುವ ಕಿಡ್ನಿತಜ್ಞ ಡಾ.ಮಂಜುನಾಥ ದೊಶೆಟ್ಟಿ, ‘ಪ್ರತಿ ವರ್ಷ ಮಾರ್ಚ್ ತಿಂಗಳ 2ನೇ ಗುರುವಾರ ವಿಶ್ವ ಕಿಡ್ನಿ ದಿನ ಆಚರಿಸಲಾಗುತ್ತದೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಬಹುತೇಕ ಕಿಡ್ನಿ ಸಮಸ್ಯೆಗಳನ್ನು ತಪ್ಪಿಸಬಹುದು. ಕಿಡ್ನಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ಈ ವಾಕಥಾನ್ ಉದ್ದೇಶ’ ಎಂದರು.
‘ದೇಶದಲ್ಲಿ ದಿನೇದಿನೆ ಕಿಡ್ನಿ ವೈಫಲ್ಯ ಸಮಸ್ಯೆ, ಕಿಡ್ನಿ ಹರಳು ಸಮಸ್ಯೆಗಳು ಹೆಚ್ಚುತ್ತಿದೆ. ಸಕ್ಕರೆ ಕಾಯಿಲೆ, ಪೇನ್ ಕಿಲ್ಲರ್ ಔಷಧ ಬಳಕೆ, ದೂಮಪಾನ, ಮದ್ಯಪಾನದಂಥ ಹಲವು ಕಾರಣಗಳಿವೆ. ಜೊತೆಗೆ ಕಲಬುರಗಿಯಂಥ ಪ್ರದೇಶದಲ್ಲಿ ಬಿಸಿಲು ಹೆಚ್ಚು. ಒಂದೊಮ್ಮೆ ಕಡಿಮೆ ನೀರು ಕುಡಿದರೆ, ಕಿಡ್ನಿಯಲ್ಲಿ ಕಲ್ಲು, ಅದರಿಂದ ಸೋಂಕು, ಅಂತಿಮವಾಗಿ ಕಿಡ್ನಿಯೇ ವೈಫಲ್ಯವೂ ಆಗಬಹುದು. ಹೀಗಾಗಿ ಚೆನ್ನಾಗಿ ನೀರು ಕುಡಿಯಬೇಕು. ಹಣ್ಣುಗಳನ್ನು ಹೆಚ್ಚೆಚ್ಚು ಬಳಸಬೇಕು. ಮದ್ಯಪಾನ, ದೂಮಪಾನ ಮಾಡಬಾರದು’ ಎಂದು ಸಲಹೆ ನೀಡಿದರು.
ವಾಕಥಾನ್‌ನಲ್ಲಿ ಚಿರಾಯು ಆಸ್ಪತ್ರೆಯ ಡಾ.ಆನಂದ ಶಂಕರ, ಡಾ.ಸಂತೋಷ ಕಾಮಶೆಟ್ಟಿ, ಡಾ.ವಂದನಾ ಕಾಮಶೆಟ್ಟಿ ಸೇರಿದಂತೆ ಡ್ಯೂಟಿ ವೈದ್ಯರು, ನರ್ಸಿಂಗ್ ಸಿಬ್ಬಂದಿ ಪಾಲ್ಗೊಂಡಿದ್ದರು.

