ಸಂಸದ ಜಿ ಕುಮಾರ ನಾಯಕರವರು ನೈಋತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಗೋ ಸೈಡಿಂಗ್, ಗಿಣಿಗೇರಾ–ರಾಯಚೂರು ಮಾರ್ಗ ಪ್ರಗತಿ ಕುರಿತು ಪರಿಶೀಲನೆ

ಹುಬ್ಬಳ್ಳಿ ನೈಋತ್ಯ ರೈಲ್ವೆಯ ಹೆಚ್ಚುವರಿ ಮಹಾಪ್ರಬಂಧಕರಾದ ಶ್ರೀ ಪಿ. ಅನಂತ್ ಅವರನ್ನು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಇಲಾಖೆಯ ಕಚೇರಿಯಲ್ಲಿ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕರವರು ಭೇಟಿಯಾಗಿ ಗಿಣಿಗೇರಾ ರಾಯಚೂರು ರೈಲ್ವೆ ಮಾರ್ಗದ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು,ಈ ವರ್ಷದ ಜನವರಿಯಲ್ಲಿ ಆಗಿನ ಮಹಾಪ್ರಬಂಧಕರಾದ ಶ್ರೀ ಮುಕುಲ್ ಮಾಥುರ ಅವರೊಂದಿಗೆ ನಡೆದ ಚರ್ಚೆಗಳ ಮುಂದುವರಿದ ಭಾಗವಾಗಿ ಹಲವು ಮಹತ್ವದ ರೈಲ್ವೆ ಅಭಿವೃದ್ಧಿ ವಿಷಯಗಳ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಗಿಣಿಗೇರಾ–ರಾಯಚೂರು ರೈಲು ಮಾರ್ಗ ಯೋಜನೆಯ ಪ್ರಗತಿ ಕುರಿತು ಪರಿಶೀಲನೆ ನಡೆಸಲಾಗಿದ್ದು, ಕುರ್ಡಿ ಪ್ರದೇಶವನ್ನು ಕ್ರಾಸಿಂಗ್ ಸ್ಟೇಷನ್ ಆಗಿ ಅಭಿವೃದ್ಧಿಪಡಿಸುವ ಸಾಧ್ಯತೆ ಹಾಗೂ ಮಮದಾಪುರವನ್ನು ಗ್ರೇಟರ್ ರಾಯಚೂರು ರೈಲು ನಿಲ್ದಾಣವಾಗಿ ರೂಪಿಸುವ ಕುರಿತು ಚರ್ಚೆ ನಡೆಸಲಾಯಿತು.
ಇದಲ್ಲದೆ, ರಾಯಚೂರು ರೈಲು ನಿಲ್ದಾಣದಲ್ಲಿ ಕಾರ್ಗೋ ಗೂಡ್ಸ್ ಸೈಡಿಂಗ್ ಸ್ಥಾಪಿಸುವ ವಿಷಯಕ್ಕೂ ವಿಶೇಷ ಗಮನ ಹರಿಸಲಾಯಿತು. ಈ ಎಲ್ಲಾ ಸೌಲಭ್ಯವು ಈ ಪ್ರದೇಶದ ಆರ್ಥಿಕ ಚಟುವಟಿಕೆಗೆ ಮಹತ್ತರ ಉತ್ತೇಜನ ನೀಡುವ ಸಾಧ್ಯತೆ ಇದೆ. ಇದರಿಂದ ಸಾವಿರಾರು ರೈತರು ಬೆಳೆದ ಬೆಳೆಗಳಾದ ಮೆಣಸಿನಕಾಯಿ ಮತ್ತು ಹತ್ತಿ ಸೇರಿದಂತೆ ತಮ್ಮ ಕೃಷಿ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ನೇರವಾಗಿ ರಾಯಚೂರಿನಿಂದಲೇ ರೈಲ್ವೆ ಮೂಲಕ ರವಾನಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು

ಈ ವೇಳೆಯಲ್ಲಿ ಶ್ರೀ ಅನಂತ್ ಅವರು ಈ ವಿಷಯಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ರಾಯಚೂರಿನಲ್ಲಿ ಕಾರ್ಗೋ ಟರ್ಮಿನಲ್ ಸ್ಥಾಪನೆಯ ಸಾಧ್ಯತೆಯನ್ನು ಪರಿಶೀಲಿಸಲು ಜಿಲ್ಲಾ ಆಡಳಿತದೊಂದಿಗೆ ಸಭೆಯಲ್ಲಿ ರೈಲ್ವೆ ಇಲಾಖೆ ಭಾಗವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

ರಾಯಚೂರಿನ ಯುವಜನತೆಗೆ ಉಜ್ವಲ ಮತ್ತು ಭದ್ರ ಭವಿಷ್ಯ ನಿರ್ಮಿಸಲು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಇಂತಹ ಮೂಲಸೌಕರ್ಯ ಯೋಜನೆಗಳು ಅತ್ಯಂತ ಅಗತ್ಯವಾಗಿವೆ. ಈ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅಧಿಕಾರಿಗಳೊಡನೆ ಸುಧೀರ್ಘವಾಗಿ ಚರ್ಚಿಸಿದರು..

Leave a Reply

Your email address will not be published. Required fields are marked *