ಕೊಪ್ಪಳ : ನಿರ್ವಹಣೆ ಇಲ್ಲದೆ ಸೊರಗಿ ಹಾಳು ಬಿದ್ದಿರುವ ಇಲ್ಲಿಗೆ ಸಮೀಪದ ನಿಡಶೇಸಿ ಕೆರೆ ತಟದಲ್ಲಿರುವ ಸಾರ್ವಜನಿಕ ಉದ್ಯಾನ ಪುನಶ್ಚೇತನಕ್ಕೆ ಪಟ್ಟಣದ ಸಮಾನ ಮನಸ್ಕ ಪರಿಸರ ಪ್ರೇಮಿಗಳ ತಂಡ ಆಸಕ್ತಿ ವಹಿಸಿದೆ.

ಪಟ್ಟಣದಲ್ಲಿ ಉದ್ಯಾನ ರಕ್ಷಣೆ ಸೇರಿದಂತೆ ಇಂಥ ಸಾಮಾಜಿಕ ಸೇವಾ ಕಾರ್ಯದಲ್ಲಿ ಸ್ವಯಂಪ್ರೇರಣೆಯಿಂದ ಗುರುತಿಸಿಕೊಂಡಿರುವ ಪರಿಸರಪ್ರಿಯರು ಹಸಿರು ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಸಿಗಳ ನಾಟಿ, ಗಿಡಮರಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದಾರೆ.ಈಗ ನಿರ್ಲಕ್ಷಿತ ನಿಡಶೇಸಿ ಕೆರೆ ಉದ್ಯಾನದತ್ತ ಗಮನಹರಿಸಿದ್ದು ಆರಂಭಿಕ ಹಂತದಲ್ಲಿ ಸ್ವಚ್ಛತೆ ಕೆಲಸ ಆರಂಭಿಸಿದ್ದಾರೆ. ಬುಧವಾರ ಆರಂಭಗೊಂಡಿರುವ ಉದ್ಯಾನ ಸ್ವಚ್ಛತೆ ಅಭಿಯಾನ ನಾಲ್ಕು ದಿನಗಳವರೆಗೆ ಮುಂದುವರೆಯಲಿದೆ ಎಂದು ತಿಳಿಸಲಾಗಿದೆ.

 

ಅಮರೇಗೌಡ ಬಯ್ಯಾಪುರ ಶಾಸಕರಾಗಿದ್ದ ಅವಧಿಯಲ್ಲಿ ಅವರ ಮುತುವರ್ಜಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಂದಾಜು ₹ 2 ಕೋಟಿ ಅನುದಾನದಲ್ಲಿ ಈ ಉದ್ಯಾನವನ್ನು ಕೆಆರ್‌ಡಿಎಲ್‌ ನಿರ್ಮಾಣ ಸಂಸ್ಥೆ ಅಭಿವೃದ್ಧಿಪಡಿಸಿತ್ತು. ನಂತರ ಉದ್ಯಾನದ ಪ್ರದೇಶ ಕೊರಡಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವುದರಿಂದ ಉದ್ಯಾನ ನಿರ್ವಹಣೆ ಜವಾಬ್ದಾರಿಯನ್ನು ಪಂಚಾಯಿತಿಗೆ ಹಸ್ತಾಂತರಿಸಲಾಗಿತ್ತು.

 

ಆದರೆ ಎರಡು ಮೂರು ವರ್ಷಗಳಿಂದಲೂ ಪಂಚಾಯಿತಿ ಉದ್ಯಾನದ ರಕ್ಷಣೆ ಇರಲಿ ಇದ್ದುದನ್ನು ಉಳಿಸಿಕೊಳ್ಳುವಲ್ಲಿಯೂ ನಿರ್ಲಕ್ಷ್ಯವಹಿಸಿದ್ದರಿಂದ ಉದ್ಯಾನ ಹಾಳು ಬಿದ್ದಿತ್ತು. ಪುಂಡಪೋಕರಿಗಳ ತಾಣವಾಗಿ ಅನೈತಿಕ ಚಟುವಟಿಕೆಗಳಿಗೆ ಪ್ರಶಸ್ತ ಸ್ಥಳವೂ ಆಗಿದೆ. ಕಣ್ಮನ ಸೆಳೆಯುತ್ತಿದ್ದ ಅಲ್ಲಿನ ಕಲಾಕೃತಿಗಳೆಲ್ಲ ಕಿಡಿಗೇಡಿಗಳ ಕೈಚಳಕದಿಂದ ವಿರೂಪಗೊಂಡಿರುವುದು ದುರಂತದ ಸಂಗತಿ ಎಂದೆ ಪರಿಸರ ಪ್ರಿಯರು ಬೇಸರ ಹೊರಹಾಕಿದ್ದರು. ಈ ಕುರಿತು ನಿರ್ವಹಣೆ ಜವಾಬ್ದಾರಿಯನ್ನು ಪಂಚಾಯಿತಿಯಿಂದ ಕುಷ್ಟಗಿ ಪುರಸಭೆಗೆ ವಹಿಸುವಂತೆ ಒತ್ತಡಗಳು ಇದ್ದರೂ ಅದರ ಬಗ್ಗೆ ಜಿಲ್ಲಾಡಳಿತ ಗಮನಹರಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

 

ಉದ್ಯಾನವನ್ನು ಮತ್ತೆ ಪುನಶ್ಚೇತನಗೊಳಿಸಿ ಮೊದಲಿನಂತೆ ಜನರ, ವಿದ್ಯಾರ್ಥಿಗಳ ಆಕರ್ಷಣೀಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಗೆಳೆಯರ ಬಳಗ ಶ್ರಮದಾನ ನಡೆಸುತ್ತಿದೆ. ನೌಕರರು, ನಿವೃತ್ತರು, ವಿವಿಧ ಸಂಘಟನೆಗಳ ಪ್ರಮುಖರು, ಸಾರ್ವಜನಿಕರು ಸೇರಿದಂತೆ ಅನೇಕ ಪ್ರಮುಖರೂ ಸಹ ಶ್ರಮದಾನದಲ್ಲಿ ಭಾಗಿಯಾಗಿದ್ದು ಬೆಳಿಗ್ಗೆ ಸಲಿಕೆ, ಬುಟ್ಟಿ, ಪೊರಕೆಗಳೊಂದಿಗೆ ಉದ್ಯಾನದ ಸ್ವಚ್ಛತೆಗೆ ಇಳಿದಿದ್ದು ಬುಧವಾರ ಕಂಡುಬಂದಿತು. ಅಲ್ಲದೆ ಅದಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖದಾದೂ ಮತ್ತು ಕಸ ವಿಲೇವಾರಿ ವಾಹನದೊಂದಿಗೆ ಪಂಚಾಯಿತಿ ಇತರೆ ಸಿಬ್ಬಂದಿಯೂ ಕೈಜೋಡಿಸಿದ್ದರು.

 

ಪರಿಸರಪ್ರಿಯ ಬಳಗದ ಗೆಳೆಯರಾದ ಮಹಾಂತಯ್ಯ ಅರಳೆಲೆಮಠ, ವೀರೇಶ ಬಂಗಾರಶೆಟ್ಟರ, ಭರತೇಶ ಜೋಷಿ, ಕೃಷ್ಣ ಕಂದಕೂರು, ಪಾಂಡುರಂಗ ಆಶ್ರೀತ್, ಶೇಖರಯ್ಯ ಸರಗಣಾಚಾರ, ವೀರಣ್ಣ ಹೊಕ್ರಾಣಿ, ನಾಗಪ್ಪ ಹೊಸವಕ್ಕಲ, ಮಹಾಂತೇಶ ಮಂಗಳೂರು, ಮಂಜುನಾಥ ಮಹಾಲಿಂಗಪೂರ, ಬಾಬು ಘೋರ್ಪಡೆ, ರಾಜೇಶ್ ಪತ್ತಾರ ಸೇರಿದಂತೆ ಇತರರು ಶ್ರಮದಾನದಲ್ಲಿ ತೊಡಗಿದ್ದು ಈ ಕೆಲಸಕ್ಕೆ ಇತರರೂ ಭಾಗವಹಿಸುವ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

– ವೀರೇಶ ಬಂಗಾರಶೆಟ್ಟರ, ಗೆಳೆಯರ ಬಳಗದ ಸದಸ್ಯಸಾರ್ವಜನಿಕರ ಸಹಕಾರದೊಂದಿಗೆ ನಿಡಶೇಸಿ ಕೆರೆ ಪುನಶ್ಚೇತನಗೊಂಡಿತ್ತು ಅಲ್ಲಿಯೇ ಇರುವ ಉದ್ಯಾನ ಆಕರ್ಷಣೀಯ ತಾಣವಾಗಿದ್ದರೂ ಹಾಳಾಗಿರುವುದು ಬೇಸರ ತಂದಿದೆ. ಸಾಧ್ಯವಾದಷ್ಟು ಸುಧಾರಣೆ ತರಲು ಪರಿಸರ ಪ್ರಿಯರು ಮುಂದಾಗಿದ್ದೇವೆ.

Leave a Reply

Your email address will not be published. Required fields are marked *