ಮುದ್ದೇಬಿಹಾಳ: ತಾಲೂಕಿನ ಬಹು ನಿರೀಕ್ಷಿತ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆ ಕಾಮಗಾರಿ ಹಲವು ವರ್ಷಗಳಿಂದ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ಎಸ್. ವಾಲಿ ಅವರು ಕೃಷ್ಣ ಭಾಗ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಗರಬೆಟ್ಟ ಏತ ನೀರಾವರಿ ಯೋಜನೆ 2021ರಲ್ಲಿ ಅಧಿಕೃತವಾಗಿ ಪ್ರಾರಂಭವಾಗಿದ್ದರೂ ಹಲವು ವರ್ಷಗಳಾದರೂ ಯೋಜನೆಯ ಪೂರ್ಣ ಪ್ರಮಾಣದ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಹೇಳಿದರು.
ಯೋಜನೆಯ ಪೂರ್ವ ಕಾಲುವೆ ಸುಮಾರು 12 ಕಿಲೋಮೀಟರ್ ಉದ್ದವಿದ್ದು, ಚಿಕ್ಕಗುಡ್ಡದ ಹತ್ತಿರ ಸುಮಾರು 300 ಮೀಟರ್ ಹಾಗೂ ನಾಲತವಾಡ ಸೀಮೆಯ ಭಾಗದಲ್ಲಿ ಸುಮಾರು 50 ಮೀಟರ್ ಕಾಮಗಾರಿ ಮಾತ್ರ ಬಾಕಿಯಿರುವುದರಿಂದ ಯೋಜನೆ ಅರ್ಧಕ್ಕೆ ನಿಂತಿದೆ ಎಂದು ಅವರು ತಿಳಿಸಿದರು.
ಭೂಸ್ವಾಧೀನಗೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡದಿರುವ ಕಾರಣ ರೈತರು ಕಾಲುವೆ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದು, ಇದರಿಂದ ನೀರಾವರಿ ಯೋಜನೆ ಸ್ಥಗಿತಗೊಂಡಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ನೀಡಬೇಕು. ಜೊತೆಗೆ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಮನವಿಗೆ ಸ್ಪಂದನೆ ದೊರೆಯದೆ ಕಾಮಗಾರಿ ಮುಂದುವರಿಯದಿದ್ದಲ್ಲಿ ಯುವಜನ ಸೇನೆ ವತಿಯಿಂದ ನಾಗರಬೆಟ್ಟ ಗುಡ್ಡದ ಹತ್ತಿರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಸಂಘಟನೆಯ ಪ್ರಮುಖರಾದ ಶೇಖರ್ ಗೌಡ ಉದಾನಗೌಡ್ರು, ಬಸನಗೌಡ ಎನ್. ಪಾಟೀಲ್, ಮಾಲಿಂಗರಾಯ ವನಹಳ್ಳಿ, ಶಿವಾನಂದ ಪೂಜಾರಿ, ಬಸನಗೌಡ ಎಂ. ಜಾದಲಗಿ, ರವಿ ಕೆ.ಹೆಚ್., ಸಿದ್ದು ಹಾದಿಮನಿ, ಸೋಮನಗೌಡ ಬೆಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

