ಮುದ್ದೇಬಿಹಾಳ:

ಸಮಾಜದಲ್ಲಿ ಪರಸ್ಪರ ಗೌರವ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಧರ್ಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಖ್ಯಾತ ಕನ್ನಡ ಭಾಷಣಕಾರ ಲಾಲ್ ಹುಸೇನ್ ಕಂಡಗಲ್ ಹೇಳಿದರು.

ನಗರದ ಟಾಪ್ ಇನ್ ಟೌನ್ ಹಾಲ್‌ನಲ್ಲಿ ಜಮಾಅತ್-ಎ-ಇಸ್ಲಾಮಿ ಹಿಂದ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ಇಸ್ಲಾಂ ಧರ್ಮವು ಐದು ಮೂಲ ಸ್ತಂಭಗಳ ಮೇಲೆ ಆಧಾರಿತವಾಗಿದ್ದು, ರಮಝಾನ್ ತಿಂಗಳಲ್ಲಿ ಆಚರಿಸುವ ಉಪವಾಸವು ಆತ್ಮಶುದ್ಧಿ, ಸಹನೆ ಮತ್ತು ಮಾನವೀಯತೆಯನ್ನು ಬೆಳೆಸುವ ಪವಿತ್ರ ಆಚರಣೆಯಾಗಿದೆ ಎಂದು ತಿಳಿಸಿದರು. ಸೂರ್ಯಾಸ್ತದ ನಂತರ ಉಪವಾಸ ಮುರಿಯುವ ಕ್ಷಣ ಅತ್ಯಂತ ಪವಿತ್ರವಾಗಿದ್ದು, ಅದು ದೇವರ ಕೃಪೆ ಪಡೆಯುವ ಸಮಯವೆಂದು ವಿವರಿಸಿದರು.

ಇಸ್ಲಾಂ ಮಾನವನಲ್ಲಿ ಉತ್ತಮ ನಡತೆ, ಸತ್ಯನಿಷ್ಠೆ ಹಾಗೂ ಪರಸ್ಪರ ಗೌರವದ ಮನೋಭಾವವನ್ನು ಬೆಳೆಸಲು ಪ್ರೇರೇಪಿಸುತ್ತದೆ. ಧರ್ಮದ ಹೆಸರಿನಲ್ಲಿ ದ್ವೇಷವನ್ನು ಹೆಚ್ಚಿಸುವುದಕ್ಕಿಂತ ಸಹಬಾಳ್ವೆ ಮತ್ತು ಶಾಂತಿಯ ಸಂದೇಶವನ್ನು ಹರಡುವುದು ಅಗತ್ಯ ಎಂದು ಅವರು ಹೇಳಿದರು. ಸಮಾಜದಲ್ಲಿ ಒಗ್ಗಟ್ಟು ಮತ್ತು ಪರಸ್ಪರ ಗೌರವ ಹೆಚ್ಚಿಸಲು ಇಂತಹ ಇಫ್ತಾರ್ ಸೌಹಾರ್ದ ಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಪ್ರಕಾಶ ನರಗುಂದ ಹಾಗೂ ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸಿಹುದ್ದೀನ್ ಮಾತನಾಡಿ, ರಮಝಾನ್ ತಿಂಗಳಲ್ಲಿ ಮುಸ್ಲಿಮರು ದೀರ್ಘ ಸಮಯ ಉಪವಾಸದಿಂದಿದ್ದು ಸೂರ್ಯಾಸ್ತದ ನಂತರ ಇಫ್ತಾರ್ ಮಾಡುತ್ತಾರೆ. ಇಸ್ಲಾಂನಲ್ಲಿ ರೋಜಾ ಅತ್ಯಂತ ಪ್ರಮುಖ ಇಬಾದತ್ ಆಗಿದ್ದು, ನಿಗದಿತ ವಯಸ್ಸಿನ ನಂತರ ಅದನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು. ದೈನಂದಿನ ಜೀವನದಲ್ಲಿ ಸ್ವಚ್ಛತೆ, ಶಿಸ್ತು ಮತ್ತು ಪಾವಿತ್ರ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನಾಜಿಮ್ ಅಬ್ದುಲ್ ರಹ್ಮಾನ್ ನಾಸಿರ್ ಮಾತನಾಡಿ, ಪರಸ್ಪರ ಸಹಾಯ ಸಹಕಾರ ಮತ್ತು ಮಾನವೀಯತೆ ಇಸ್ಲಾಂನ ಪ್ರಮುಖ ಮೌಲ್ಯಗಳಾಗಿವೆ. ಪ್ರತಿಯೊಂದು ಧರ್ಮಕ್ಕೂ ಗೌರವ ನೀಡುವುದು ಸಮಾಜದ ಶಾಂತಿ ಮತ್ತು ಏಕತೆಗೆ ಅಗತ್ಯವಾಗಿದೆ ಎಂದು ಹೇಳಿದರು. ಉಪವಾಸದ ಆಚರಣೆ ಕೇವಲ ಇಸ್ಲಾಂದಲ್ಲಷ್ಟೇ ಅಲ್ಲದೆ ಹಲವು ಧರ್ಮಗಳಲ್ಲಿಯೂ ಕಂಡುಬರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಜಮಾಅತ್-ಎ-ಇಸ್ಲಾಮಿ ನಾಜಿಮ್ ನೂರ್ ನಬಿ ನದಾಫ ಸ್ವಾಗತ ಭಾಷಣ ಮಾಡಿ, ಇಫ್ತಾರ್ ಕೂಟದ ಉದ್ದೇಶವನ್ನು ವಿವರಿಸಿದರು. ದೇಶದ ಸಂಸ್ಕೃತಿಯಲ್ಲಿ ಸಹೋದರತ್ವ ಮತ್ತು ಸೌಹಾರ್ದತೆಯ ಪರಂಪರೆ ಇದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಐಒ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಅತಿಥಿಗಳಿಗೆ ಇಫ್ತಾರ್ ಸೇವೆ ಸಲ್ಲಿಸಿದರು. ನಗರದಲ್ಲಿನ ಗಣ್ಯರಾದ ಮಹಬೂಬ್ ಮುಲ್ಲಾ, ಸಿ.ಬಿ. ಅಸ್ಕೀ, ಕಾಮರಾಜ್ ಬಿರಾದಾರ, ಎಂ.ಎಂ. ಬೆಲಗಲ್, ಅಮರೇಶ್ ಗೂಳಿ, ಪ್ರಭು ಕಡ್ದಿ, ಅಶೋಕ್ ಕಾಮತ್, ಹಾಜಿ ಬಿ.ಎಚ್. ಸುತಾರ, ಎಂ.ಡಿ. ಜರತಾರಗರ್, ನ್ಯಾಯವಾದಿಗಳಾದ ಎಂ.ಎ. ಮುದ್ದೇಬಿಹಾಳ, ಅಬ್ದುಲ್ ಗಫೂರ್ ಮಕಾಂದಾರ, ಮೊಹಮ್ಮದ್ ಛಪ್ಪರಬಂದ್, ಮೊಹಮ್ಮದ್ ರಫೀಕ್ ಮಕಾಂದಾರ, ನೂರೈನ್ ಖಾನ್ ಸೇರಿದಂತೆ ಅನೇಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಮೊಹಮ್ಮದ್ ನಿಹಾಲ್ ಮುಲ್ಲಾ ನಿರೂಪಿಸಿ, ಕೊನೆಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *