ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಾಗ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಾಧೀಶ, ನಾಡೋಜ ಡಾ.ಶಿವರಾಜ ಪಾಟೀಲ್ ಹೇಳಿದರು.ಕಲಬುರಗಿಯ ಶಿವರಾಜ ಪಾಟೀಲ ಪ್ರತಿಷ್ಠಾನ, ಸರ್ವಜ್ಞ ಮತ್ತು ಜಸ್ಟೀಸ್ ಶಿವರಾಜ ಪಾಟೀಲ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪುರಸ್ಕಾರ ನೀಡಿ ಮಾತನಾಡಿ, ಬಡವರಿಗೆ ಕಷ್ಟದಲ್ಲಿದ್ದವರಿಗೆ ಸಹಾಯ, ದಾನ ಮಾಡುವಾಗ, ದಾಸೋಹ ಮಾಡುವಾಗ ಕೊಡುವ ಕೈ ಮುಂದಾಗಬೇಕು, ತಲೆಬಾಗಬೇಕು.ಭಗವಂತ ಮತ್ತೊಬ್ಬರಿಗೆ ನೀಡುವ ಸಾಮರ್ಥ್ಯ ಕೊಟ್ಟಿದ್ದಾನೆ ಎಂಬ ವಿನಯ ಭಾವನೆ ಇರಬೇಕು ಎಂದರು.ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಟಿ.ಎನ್.ಇನವಳ್ಳಿ ಮಾತನಾಡಿ, ಸೌಜನ್ಯ, ಸೌಮ್ಯತೆ, ವಿನಮ್ರತೆ ಇದ್ದರೆ ಯಾವ ಮಟ್ಟಕ್ಕೂ ಏರಬಹುದು ಎಂಬುದಕ್ಕೆ ಜಸ್ಟಿಸ್ ಡಾ.ಶಿವರಾಜ ಪಾಟೀಲರು ನಮಗೆಲ್ಲ ಮಾದರಿ ಎಂದರು.ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು. ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಮಾತನಾಡಿ, ನಾಡೋಜ ಡಾ.ಶಿವರಾಜ ಪಾಟೀಲರು ೧೨ನೇ ಶತಮಾನದ ಬಸವ ಶರಣರಂತೆ ಇದ್ದಾರೆ. ಶರಣರ ಮೂಲ ಎಂದರೆ ರೈತ ಸಂಸ್ಕೃತಿ. ಮನುಷ್ಯನಿಗೆ ಅರಿವು ಬಂದದ್ದು, ಭೂಮಿಯ ಜತೆಗಿನ ಮಹತ್ವ ತಿಳಿದಾಗ, ಬಸವಣ್ಣನವರ ಕಾಯಕ, ಪ್ರಸಾದ, ದಾಸೋಹ ತತ್ವಗಳ ಮೇಲೆ ಶರಣ ತತ್ವ ನಿಂತಿದೆ ಎಂದರು.ಸಾನಿಧ್ಯ ವಹಿಸಿದ್ದ ಇಲಕಲ್ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮಿಗಳು ಆಶೀರ್ವಚನ ನೀಡಿ, ಒಬ್ಬ ಮನುಷ್ಯ ತಾನು ಹೇಗೆ ಆಗಬೇಕು ಎಂಬುದಕ್ಕೆ ಒಬ್ಬ ವ್ಯಕ್ತಿಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದರು. ಸಮ್ಮುಖ ವಹಿಸಿದ್ದ ನಾಲವಾರ ಕೋರಿಸಿz್ದೆÃಶ್ವರ ಮಠದ ಡಾ.ಸಿದ್ದತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶಿವರಾಜ ಪಾಟೀಲ ಅವರು ಮಾನವೀಯ ಅಂತಃಕರಣದ ಸರಳ ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವ ಹೊಂದಿರುವ ಶ್ರೇಷ್ಠ ಶರಣರು ಎಂದು ಶ್ಲಾಘಿಸಿದರು.ದ್ವಿತೀಯ ಪಿಯುಸಿ ಪರೀಕ್ಷೆ, ಜೆಇಇ, ನೀಟ್, ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ೨೫,೦೦೦ ರೂ. ವಿದ್ಯಾರ್ಥಿವೇತನ, ೧೧,೦೦೦ ರೂ. ಪ್ರೋತ್ಸಾಹಧನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇತಿಹಾಸ ಅಕಾಡೆಮಿ ಕಾರ್ಯದರ್ಶಿ ಕೆ.ಎಲ್.ರಾಜಶೇಖರ, ನಿವೃತ್ತ ನ್ಯಾಯಾಧೀಶ ಎನ್.ಶರಣಪ್ಪ, ಸಂಸ್ಥೆಯ ಅಧ್ಯಕ್ಷೆ ಗೀತಾ ಚನ್ನಾರಡ್ಡಿ ಪಾಟೀಲ್, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್ ಪಾಟೀಲ, ಡಾ.ರಾಕೇಶ್ ಪಾಟೀಲ್, ಪ್ರಾಚಾರ್ಯ ಪ್ರಶಾಂತ್ ಕುಲಕರ್ಣಿ, ವಿನುತಾ ಆರ್.ಬಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ ಇದ್ದರು. ತ್ರಿವೇಣಿ ಭಾವಿ ವಂದಿಸಿದರು. ಡಾ.ವಿದ್ಯಾವತಿ ಪಾಟೀಲ್ ನಿರೂಪಿಸಿದರು.

Leave a Reply

Your email address will not be published. Required fields are marked *