ಉನ್ನತ ಶಿಕ್ಷಣ ಸಂಸ್ಥೆ, ಕಾಲೇಜು ಅಧ್ಯಾಪಕರು ವಿನೂತನ ಬೋಧನಾ ತಂತ್ರ ಅಳವಡಿಕೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ವಿಷಯದ ಅರಿವು, ಆಸಕ್ತಿ, ಸಕ್ರಿಯ ಕಲಿಕಾ ಮತ್ತು ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹಿಸಬೇಕು ಎಂದು ಕಲಬುರಗಿ ವಿಟಿಯು ಪ್ರಾದೇಶಿಕ ನಿರ್ದೇಶಕಿ ಪ್ರೊ.ಶುಭಾಂಗಿ ಡಿ.ಸಿ.ಸಲಹೆ ನೀಡಿದರು.ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೂಸಾ/ಪಿಎಂ-ಉಷಾ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನವೀನ ಬೋಧನಾ ತಂತ್ರ ಮತ್ತು ಪಠ್ಯಕ್ರಮ ಚೌಕಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವೈಜ್ಞಾನಿಕ ಚಿಂತನೆ ಬೆಳೆಸಿ:ಬದಲಾಗುತ್ತಿರುವ ಶೈಕ್ಷಣಿಕ ಕ್ಷೇತ್ರಕ್ಕೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲಿನ ಬೆಳವಣಿಗೆ, ಪಠ್ಯಕ್ರಮ ಚೌಕಟ್ಟು, ಬೋಧನಾ ವಿಧಾನ, ತಂತ್ರಜ್ಞಾನ ಬಳಕೆ, ವಿಷಯದ ಗ್ರಹಿಕೆಯೊಂದಿಗೆ ಎಐ, ರೋಬೋಟ್ ತಾಂತ್ರಿಕ ಅರಿವು ಮೂಡಿಸಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಎಂದರು. ಮ್ಯಾಜಿಕ್ ಬಸ್ ಇಂಡಿಯಾ ತರಬೇತಿ ಅಧಿಕಾರಿ ಜೋಶುವಾ ಡೇನಿಯಲ್ ಮಾತನಾಡಿ, ವಿವಿಧ ವೃತ್ತಿಪರ ಸಂಸ್ಥೆಗಳ ಅಗತ್ಯ ಕೌಶಲ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಕಲಿಕೆ ವಿಧಾನ ನಡುವಿನ ಅಂತರ ಕಡಿಮೆಗೊಳಿಸಲು ಶಿಕ್ಷಣದ ಜತೆಗೆ ಅಗತ್ಯ ವೃತ್ತಿ ಕೌಶಲ, ವೃತ್ತಿ ಜ್ಞಾನ ಮತ್ತು ವೃತ್ತಿ ಅನುಭವ ಬೋಧಿಸಬೇಕು. ಉದ್ಯಮ ಜಗತ್ತಿಗೆ ವಿದ್ಯಾರ್ಥಿಗಳು ಮುಕ್ತವಾಗಿ ತೆರೆದುಕೊಳ್ಳಲು ಅಧ್ಯಾಪಕರು ಹೊಸ ಜ್ಞಾನ, ತಂತ್ರಜ್ಞಾನದ ಕಲಿಕೆಗೂ ಪ್ರೊತ್ಸಾಹಿಸಬೇಕು ಎಂದರು. ಜೆಕಾರ್ತಿಕೇಯ ತರಬೇತಿ ಸಲಹಾ ಸಂಸ್ಥೆಯ ಸಿಇಓ ಡಾ.ಅಭಯ್ ಸರ್ದೇಶ್‌ಪಾಂಡೆ ಮಾತನಾಡಿ, ಇಂದಿನ ಗುಣಮಟ್ಟ ಶಿಕ್ಷಣದೊಂದಿಗೆ ಮಾನವನ ನಡವಳಿಕೆ ಬದಲಾಗಬೇಕು. ಜತೆಗೆ ಶಿಕ್ಷಕರು ಮತ್ತು ಶೈಕ್ಷಣಿಕ ಸುಧಾರಣೆಗೆ ಈ ತರಬೇತಿಯಿಂದ ವರ್ಡ್ ಟು ವರ್ಲ್ಡ್ ಲರ್ನಿಂಗ್ ಸಾಧ್ಯವಾಗಲಿದೆ. ಶಿಕ್ಷಕರು ಪ್ರಾಯೋಗಿಕ ಮತ್ತು ಸಂವಾದಾತ್ಮಕ ಬೋಧನೆಗೆ ಒತ್ತು ನೀಡಬೇಕು ಎಂದರು. ಎಐ ಸಾಧನ ನೆರವು:ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ಮಾತನಾಡಿ, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಬೋಧನೆ ಶಿಕ್ಷಕರ ವೃತ್ತಿ ಜೀವನದ ಅವಿಭಾಜ್ಯ ಅಂಗ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಮಾನ್ಯತೆ ಮತ್ತು ಉನ್ನತ ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸಲು ಪ್ಯಾಕಲ್ಟಿ ಡೆವಲಪಮೆಂಟ್ ಕಾರ್ಯಕ್ರಮ ಬಹಳ ಮುಖ್ಯ. ಶಿಕ್ಷಕರು ತರಬೇತಿ ಮತ್ತು ಬೋಧನಾ ತಂತ್ರ ಅಳವಡಿಸಿಕೊಳ್ಳಬೇಕು. ಮಾಹಿತಿ ತಂತ್ರಜ್ಞಾನದಿAದ ಶಿಕ್ಷಣ, ಸಂಶೋಧನೆ, ಅಗತ್ಯ ಸಂಪನ್ಮೂಲ ಲಭ್ಯತೆ, ಕೌಶಲ ಸಾಧ್ಯವಾಗುತ್ತಿದೆ. ಮಾನವನ ವಿನೂತನ ಆಲೋಚನೆಗೆ ಎಐ ಸಾಧನಗಳು ನೆರವಾಗುತ್ತಿವೆ ಎಂದರು.ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ.ಹೂವಿನಭಾವಿ ಬಾಬಣ್ಣ, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಜಿ.ಕಣ್ಣೂರು, ಹಣಕಾಸು ಅಧಿಕಾರಿ ಜಯಾಂಬಿಕಾ ಇದ್ದರು. ಅನ್ವಯಿಕ ವಿದ್ಯುನ್ಮಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ. ಆರ್.ಎಲ್.ರಾಯಭಾಗಕರ್ ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಪ್ರೊ.ರಮೇಶ್ ಲಂಡನಕರ್ ಸ್ವಾಗತಿಸಿದರು. ಪ್ರೊ.ಮಲಶೆಟ್ಟಿ, ಡಾ.ಸುರೇಶ್ ಜಂಗೆ ಹಾಗೂ ಡಾ. ಟಿ.ನಿಂಗಣ್ಣ ಅತಿಥಿ ಪರಿಚಯ ಮಾಡಿದರು. ಸಂಗೀತಾ ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿ, ವಂದಿಸಿದರು.ವಿಶ್ವವಿದ್ಯಾಲಯದ ಪದವಿ ಮಹಾವಿದ್ಯಾಲಯಗಳ ಅಧ್ಯಾಪಕರು ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಸದಸ್ಯರಾದ ರೇಖಾ ಕುಮಾರಿ, ಜಾಬೆಜ್, ಫೌಜಿತ್ ಭಾಗವಹಿಸಿದ್ದರು. ”
ಹೊಸದನ್ನು ಕಲಿಯುವ ಜತೆಗೆ ವಿದ್ಯಾರ್ಥಿಗಳನ್ನು ಕೌಶಲ ಕಲಿಕೆಯ ಕಡೆಗೆ ಆಸಕ್ತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ. ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ತರಬೇತಿಯಿಂದ ಬೋಧನೆ ಮತ್ತು ಸಂಶೋಧನೆಯಲ್ಲಿ ನಿರಂತರತೆ ಕಾಯ್ದುಕೊಂಡರೆ ಸಾಧನೆ ಮಾಡಬಹುದು. ಯಾವುದೇ ಸಂಶೋಧನೆ ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು.

