ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕಾಗಿ, ಹಾಗೂ ಕಾಮಗಾರಿಗಾಗಿ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡ ಪಿಡಿಒ ಹುಚ್ಚಪ್ಪ, ಮತ್ತು ಜೆಇ ಮೌನೇಶ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯಿಂದ ದೂರು ನೀಡಲಾಗಿದೆ.
ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯ ಮುಖಂಡ ಗುರುನಾಥ ಗದ್ರಟಗಿ ಮಾತನಾಡಿ, ತಿಡಿಗೋಳ ಗ್ರಾ.ಪಂ.ಅಧಿಕಾರಿಯಾದ ಹುಚ್ಚಪ್ಪ ಹಾಗೂ ಜೆಇ ಮೌನೇಶ ಅವರು, 2022-23 ನೇ ಸಾಲಿನ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಪಂಚಾಯತಿ ವ್ಯಾಪ್ತಿಯ ವಿಕಲಚೇತನರ ಕಲ್ಯಾಣ ಕಾರ್ಯಕ್ರಮದ ಮತ್ತು ಕಾಮಗಾರಿಗಾಗಿ ಮೀಸಲಿಟ್ಟ ಸುಮಾರು 1 ಲಕ್ಷ 16 ಸಾವಿರ ಹಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಗಮಂದಿರದ ಸಲುವಾಗಿ ಬಳಕೆ ಮಾಡಿಕೊಂಡಿದ್ದಾರೆ.
ಈ ಹಿಂದೆ ಇದ್ದ ಸ್ಲಾಬ್ ಗಳಿಗೆ ಸಿಮೆಂಟ್ ಪ್ಲಾಸ್ಟರ್ ಮಾಡಿ, 4 ರಿಂದ 4.5 ಫೀಟ್ ಉದ್ದ ಮತ್ತು 2.5 ಫೀಟ್ ಅಗಲ ರ್ಯಾಂಪ್ ಮಾಡಿ, ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಕೂಡಲೇ ಇವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ತಾಲೂಕು ಪಂಚಾಯತಿ ಇಒ ಅವರಿಗೆ ದೂರು ಸಲ್ಲಿಸಿದ್ದು, ಶೀಘ್ರವೇ ತಾಲೂಕು ಪಂಚಾಯತಿ ಅಧಿಕಾರಿಗಳು ಇದರ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕು. ತಪ್ಪಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ: ಶರಣಪ್ಪ ಕುರುಕುಂದಿ, ವಿರುಪಣ್ಣ, ಹಾಗೂ ಲಿಂಗಪ್ಪ ಇದ್ದರು.

