ಬಳಗಾನೂರು ಮಾ.3:- ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಸುಂದರಲಾಲ್ ಬಹುಗುಣ ಇಕೋ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಸ್ವಚ್ಚತೆ ಕುರಿತು ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.ಆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಬಳಗಾನೂರು ಪಟ್ಟಣ ಪಂಚಾಯ್ತಿಯ ಸಮುದಾಯ ಸಂಚಾಲಕಿಯರಾದ ಗೀತಾ ಸುರೇಶ್ ಮತ್ತು ದುರುಗಮ್ಮ ವಿರುಪಾಕ್ಷಿ ಭಾಗವಹಿಸಿದ್ದರು.

ದುರುಗಮ್ಮ ವಿರುಪಾಕ್ಷಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿ, ಸ್ವಚ್ಚತೆಯ ಮಹತ್ವವನ್ನು ತಿಳಿಸಿದರು.ಗೀತಾ ಸುರೇಶ್ ಮಾತನಾಡಿ,

“ಪರಿಸರ ಇದ್ದರೆ ನಾವು ಇರುತ್ತೇವೆ.ಪರಿಸರವೇ ಮಾನವ ಜೀವನದ ಮೂಲಾಧಾರ.ವಿದ್ಯಾರ್ಥಿಗಳು ಸ್ವಚ್ಚತೆ, ಆರೋಗ್ಯ ಮತ್ತು ಪರಿಸರದ ರಕ್ಷಣೆಯ ಹೊಣೆ ಹೊತ್ತು, ಮನೆಯಲ್ಲಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು” ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.ನಂತರ ಸಹಶಿಕ್ಷಕಿ ಸುನಿತಾ ಮಾತನಾಡಿ,

“ಪರಿಸರ ಮತ್ತು ಮಾನವನ ನಡುವೆ ಆದಿಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪರಿಸರ ನಾಶವೇ ಮಾನವಕುಲದ ವಿನಾಶ” ಎಂದು ಎಚ್ಚರಿಸಿದರು.ಅತಿಥಿ ಶಿಕ್ಷಕ ಬಸವರಾಜ ಪೂಜಾರಿ ಇಂದಿನ ವಿದ್ಯಾರ್ಥಿಗಳೇ ನಾಳಿನ ಭವ್ಯ ಭಾರತದ ಶಿಲ್ಪಿಗಳು. ದೇಶದ ನೆಲ, ಜಲ, ಪರಿಸರ ಸಂರಕ್ಷಣೆ ಅವರ ಹೊಣೆಗಾರಿಕೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಮಹಾದೇವಮ್ಮ ವಹಿಸಿದ್ದರು.ವಿದ್ಯಾರ್ಥಿನಿ ಗಾಯತ್ರಿ ಮರಿಸ್ವಾಮಿ ಪ್ರಾರ್ಥಿಸಿದರು.ಅತಿಥಿ ಶಿಕ್ಷಕ ಕಾರ್ತಿಕ್ ಸ್ವಾಗತಿಸಿದರು.ಬಸವರಾಜ ಪೂಜಾರಿ ವಂದಿಸಿದರು.ಇಕೋ ಕ್ಲಬ್ ಮಾರ್ಗದರ್ಶಕ ಶಿಕ್ಷಕರಾದ ಎಮ್. ರಫಿಯುದ್ದೀನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಶ್ವೇತಾ, ಕರಣಿಕ ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಚ್ಚತೆ, ಆರೋಗ್ಯ ಮತ್ತು ಪರಿಸರ ರಕ್ಷಣೆಯ ಸಂದೇಶ ಸಾರಿದ ಈ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಹೊಸ ಜಾಗೃತಿ ಮೂಡಿಸಿತು.

ವರದಿ,ಸುರೇಶ ಬಳಗಾನೂರು

Leave a Reply

Your email address will not be published. Required fields are marked *