ಇವತ್ತಿನ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಪರೀಕ್ಷೆಯನ್ನು ಎದುರಿಸುವ ಮನಸ್ಸಿಲ್ಲದವರಿಗೆ ಅದು ತುಂಬಾ ಕಷ್ಟಕರವಾಗಿ ಕಾಣುತ್ತದೆ. ಪರೀಕ್ಷೆಯ ಭಯ ಅಥವಾ ಆತಂಕವು ಅನೇಕ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಕಲಿತದ್ದನ್ನು ಮರೆಯುವಂತೆ ಮಾಡಿ, ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸರಿಯಾದ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಭಯವನ್ನು ಸುಲಭವಾಗಿ ನಿವಾರಿಸಬಹುದು.
ಪರೀಕ್ಷಾ ಭಯದ ಲಕ್ಷಣಗಳು
ಪರೀಕ್ಷಾ ಭಯವು ದೈಹಿಕ ಹಾಗೂ ಮಾನಸಿಕ ಲಕ್ಷಣಗಳನ್ನು ಹೊಂದಿರುತ್ತದೆ:
ಹೃದಯದ ಬಡಿತ ಹೆಚ್ಚಾಗುವುದು
ಬೆವರುವುದು, ನಡುಕ
ವಾಕರಿಕೆ ಅಥವಾ ತಲೆನೋವು
ಗೊಂದಲ, ಏಕಾಗ್ರತೆಯ ಕೊರತೆ
ನಕಾರಾತ್ಮಕ ಆಲೋಚನೆಗಳು
ನಿದ್ರಾಹೀನತೆ
ಪರೀಕ್ಷಾ ಭಯ ನಿವಾರಣೆಯ ಮಾರ್ಗಗಳು
1. ಸಮರ್ಪಕ ತಯಾರಿ
ಪರೀಕ್ಷಾ ಭಯ ನಿವಾರಣೆಗೆ ಅತ್ಯುತ್ತಮ ಮಾರ್ಗವೆಂದರೆ ನಿಯಮಿತ ಹಾಗೂ ಸಮರ್ಪಕ ತಯಾರಿ. ಸಮಯಪಟ್ಟಿ ರೂಪಿಸಿಕೊಂಡು ಪ್ರತಿದಿನ ಸ್ವಲ್ಪ ಸ್ವಲ್ಪ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಕೊನೆಯ ಕ್ಷಣದ ಓದು ಆತಂಕವನ್ನು ಹೆಚ್ಚಿಸುತ್ತದೆ.
2. ಧನಾತ್ಮಕ ಆಲೋಚನೆ
“ನನಗೆ ಆಗುವುದಿಲ್ಲ” ಎಂಬ ಯೋಚನೆಯ ಬದಲು “ನಾನು ಪ್ರಯತ್ನಿಸುತ್ತೇನೆ”, “ನಾನು ಸಿದ್ಧನಾಗಿದ್ದೇನೆ” ಎಂಬ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಿ. ಆತ್ಮವಿಶ್ವಾಸವೇ ಯಶಸ್ಸಿನ ಮೂಲ.
3. ಆಳವಾದ ಉಸಿರಾಟದ ವ್ಯಾಯಾಮ
ಪರೀಕ್ಷೆಗೆ ಮುನ್ನ ಅಥವಾ ಪರೀಕ್ಷೆಯ ಸಮಯದಲ್ಲಿ ಆತಂಕವಾದರೆ, ಆಳವಾದ ಉಸಿರಾಟದ ವ್ಯಾಯಾಮ ಮಾಡಿ. ಇದು ಮನಸ್ಸನ್ನು ಶಾಂತಗೊಳಿಸಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
4. ಸಾಕಷ್ಟು ನಿದ್ರೆ ಮತ್ತು ಪೌಷ್ಟಿಕ ಆಹಾರ
ಪರೀಕ್ಷೆಗೆ ಮುನ್ನ ಚೆನ್ನಾಗಿ ನಿದ್ರೆ ಮಾಡಿ. ಪೌಷ್ಟಿಕ ಆಹಾರ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಅಥವಾ ಅತಿಯಾಗಿ ತಿಂದು ಪರೀಕ್ಷೆಗೆ ಹೋಗಬೇಡಿ.
5. ವಾಸ್ತವಿಕ ನಿರೀಕ್ಷೆಗಳು
ಪ್ರತಿಯೊಬ್ಬರಲ್ಲೂ ವಿಭಿನ್ನ ಸಾಮರ್ಥ್ಯಗಳಿವೆ. ನಿಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಮಾಡಲು ಪ್ರಯತ್ನಿಸಿ. ಪರಿಪೂರ್ಣತೆಯ ಒತ್ತಡವನ್ನು ತಪ್ಪಿಸಿ.
6. ವಿಶ್ರಾಂತಿ ತಂತ್ರಗಳು
ಯೋಗ, ಧ್ಯಾನ, ಸಂಗೀತ ಕೇಳುವುದು ಮುಂತಾದ ತಂತ್ರಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯಕ.
7. ಸಮಯ ನಿರ್ವಹಣೆ
ಪರೀಕ್ಷಾ ಸಮಯದಲ್ಲಿ ಪ್ರತೀ ಪ್ರಶ್ನೆಗೆ ಎಷ್ಟು ಸಮಯ ನೀಡಬೇಕು ಎಂದು ಯೋಜಿಸಿ. ಸುಲಭ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ನಂತರ ಕಠಿಣ ಪ್ರಶ್ನೆಗಳತ್ತ ತಿರುಗಿ.
ಪರೀಕ್ಷಾ ದಿನದ ಸಲಹೆಗಳು
ಬೇಗ ಎದ್ದು, ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿ
ಸ್ನೇಹಿತರೊಂದಿಗೆ ಅತಿಯಾದ ಚರ್ಚೆಯನ್ನು ತಪ್ಪಿಸಿ
ಪ್ರಶ್ನೆಪತ್ರಿಕೆಯನ್ನು ಗಮನದಿಂದ ಓದಿ
ಉತ್ತರ ಬರೆಯುವ ಮೊದಲು 2–3 ನಿಮಿಷ ಯೋಜನೆ ರೂಪಿಸಿ
ಆತಂಕವಾದರೆ ಕಣ್ಣು ಮುಚ್ಚಿ ಆಳವಾಗಿ ಉಸಿರಾಡಿ
ಪರೀಕ್ಷೆಯ ಭಯ ಸಹಜ. ಆದರೆ ಅದು ನಿಮ್ಮನ್ನು ನಿಯಂತ್ರಿಸದಂತೆ ನೋಡಿಕೊಳ್ಳಿ. ಸರಿಯಾದ ತಯಾರಿ, ಧನಾತ್ಮಕ ದೃಷ್ಟಿಕೋನ ಮತ್ತು ಶಾಂತ ಮನಸ್ಸಿನ ಮೂಲಕ ನೀವು ಈ ಭಯವನ್ನು ಜಯಿಸಬಹುದು. ನಿಮ್ಮ ಪ್ರಯತ್ನವೇ ಮುಖ್ಯ, ಫಲಿತಾಂಶವಲ್ಲ.
ಕಲಿಸಿದ ಗುರುಗಳಿಗೂ, ತಂದೆ–ತಾಯಿಗಳಿಗೂ ಕೀರ್ತಿಯನ್ನು ತರುವಂತಹ ವಿದ್ಯಾರ್ಥಿಗಳಾಗಿರಿ ಎಂಬ ಹಾರೈಕೆ.
– ಆಂಜನೇಯ ನಸಲಾಪುರ
ಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿ

