ಲಿಂಗಸಗೂರು ಮಾ 03 : ಡಿ. ದೇವರಾಜ ಅರಸು ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕಟ್ಟಡ ಕಾರ್ಮಿಕ ಇಲಾಖೆ ಮೂಲಕ ಜಾರಿಯಲ್ಲಿರುವ ವಿವಿಧ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವಜ್ಜಲ್ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯತ್ ವತಿಯಿಂದ 22 ಮಹಿಳೆಯರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸು ನಿಗಮದ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ 2018-19ರಿಂದ 2022-23 ಆಯ್ಕೆಯಾದ ಒಟ್ಟು 26 ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ನೀಡಲಾಯಿತು. ಅಲ್ಲದೆ, ಕಾರ್ಮಿಕ ಇಲಾಖೆಯಿಂದ ಆಯ್ಕೆಯಾದ 300 ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಶಾಸಕ ಮಾನಪ್ಪ ಡಿ ವಜ್ಜಲ್

ಸರ್ಕಾರದ ಕೆಲವು ಯೋಜನೆಗಳಲ್ಲಿ ಫಲಾನುಭವಿಗಳನ್ನು ಗುರುತಿಸುವ ಮತ್ತು ಸೌಲಭ್ಯಗಳನ್ನು ನೀಡುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದು ಗಮನಕ್ಕೆ ಬರುತ್ತಿದೆ. ಅಧಿಕಾರಿಗಳು ಇಂತಹ ವಿಳಂಬ ನೀತಿಯನ್ನು ತಿದ್ದಿಕೊಂಡು, ಯೋಜನೆಗಳ ಅನುಷ್ಠಾನವನ್ನು ವೇಗಗೊಳಿಸಬೇಕು ಎಂದು ಸೂಚಿಸಿದರು. ಯೋಜನೆಗಳ ಸದುಪಯೋಗ ಪಡೆದು ರೈತರು, ನಿರ್ಗತಿಕರು ಹಾಗೂ ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ವಿಶೇಷವಾಗಿ ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿ ನೀರಾವರಿ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆದೇಶ, ಜಿಲ್ಲಾ ದೇವರಾಜ ಅರಸು ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್, ಕಾಂತಣ್ಣ, ಕಟ್ಟಡ ಕಾರ್ಮಿಕ ಇಲಾಖೆ ಅಧಿಕಾರಿ ಶಾಂತಕುಮಾರ್ ಮೌನೇಶ ಹಲಕಾವಟಗಿ, ಗಿರಿ ಮಲ್ಲನಗೌಡ ಕರಡಕಲ್‌, ವೆಂಕನಗೌಡ ಪಾಟೀಲ್‌, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಪಂಪನಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *