ರಾಯಚೂರು : ರಾಜ್ಯ ಸಚಿವ ಸಂಪುಟ ಅನುಮೋದಿಸಿರುವ 56,432 ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಧರಣಿ ನಡೆಯಿತು.ರಾಜ್ಯದಲ್ಲಿ ಖಾಲಿ ಇರುವ 2,84,881 ಹುದ್ದೆಗಳಲ್ಲಿ 56,432 ಹುದ್ದೆಗಳಿಗೆ ಯಾವುದೇ ವಿಳಂಬವಿಲ್ಲದೆ ಅಧಿಸೂಚನೆ ಹೊರಡಿಸಬೇಕು.
ಶಿಕ್ಷಕರ ಹುದ್ದೆಯನ್ನು ನಾಶಮಾಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಖಾಲಿ ಇರುವ 5000ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಹಾಗೂ ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪ್ರತೀ ವರ್ಷ ಖಾಲಿಯಾಗುವ ಹುದ್ದೆಗಳ ಭರ್ತಿಗೆ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳ ಭರ್ತಿಗೆ ಕೂಡಲೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ವೆಚ್ಚ ಕಡಿತ ಮಾಡುವ ಹೆಸರಿನಲ್ಲಿ ಜಾರಿಗೊಳಿಸಲಾಗಿರುವ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್ಮೆಂಟ್(ಎಫ್. ಆರ್. ಬಿ. ಎಂ) ಕಾಯ್ದೆಯನ್ನು ರದ್ದುಗೊಳಿಸಬೇಕು. ರಾಜ್ಯದಲ್ಲಿ ಹಾರ್ನಳ್ಳಿ ರಾಮಸ್ವಾಮಿ ವೀರಪ್ಪ ಮೊಗಲಿ ಮತ್ತು ದೇಶಪಾಂಡೆ ನೇತೃತ್ವದ ಎ. ಆರ್. ಸಿ ಶಿಫಾರಸುಗಳನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಮತ್ತು ಎಲ್ಲಾ ತೆರನಾದ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು ಹಾಗೂ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗಾವಕಾಶ ದೊರೆಯುವವರಿಗೆ ಗೌರವಯುತ ಜೀವನ ನಡೆಸಲು ಸೂಕ್ತವಾದ ನಿರುದ್ಯೋಗ ಭತ್ತೆ ನೀಡಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್ ಸಿಯಲ್ಲಿನ ಅಕ್ರಮ ತಡೆಗಟ್ಟಲು ರಾಜ್ಯ ಸರ್ಕಾರ ಹೋಟ ಸಮಿತಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ಸರಕಾರಿ ಸಂಸ್ಥೆಗಳ ಖಾಸಗೀಕರಣ ನೀತಿಯನ್ನು ರದ್ದುಗೊಳಿಸಬೇಕು. ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು, ಖಾಯಂ ನೇಮಕಾತಿಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಚನ್ನಬಸವ ಜಾನೇಕಲ್, ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಕುರ್ಡಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಶಿವಪ್ಪ ಅಸ್ಕಿಹಾಳ್, ವಿನೋದ ಕುಮಾರ, ಉದ್ಯೋಗ ಆಕಾಂಕ್ಷಿಗಳಾದ ಅಶೋಕ, ಮೌನೇಶ, ಕೃಷ್ಣ, ಸಂತೋಷ ಸಾಗರ್, ಶರಣಬಸವ, ರವಿ, ಜಮಶೇರ್, ಮೋಹನ, ಸಣ್ಣ ಬಸವ, ಮಂಜುನಾಥ, ಶ್ರೀಕಾಂತ್, ಶಾಂತಕುಮಾರ್, ಶಹಬಾಝ್ ಪಾಲ್ಗೊಂಡಿದ್ದರು.

