ಲಿಂಗಸಗೂರು ಮಾ. 3 : 2025-26ನೇ ಸಾಲಿನ 40 ಕ್ಲೋಸಿಂಗ್ ಕಾಮಗಾರಿಗಳು ಆರಂಭವಾಗಿದ್ದು, ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ಆದ್ದರಿಂದ ಗುತ್ತಿಗೆದಾರರಿಗೆ 2.52 ಕೋಟಿ ಬಿಲ್ ಪಾವತಿಯನ್ನು ತಡೆಹಿಡಿಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಸದಸ್ಯರು ಒತ್ತಾಯಿಸಿ ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ಕಾಮಗಾರಿಗಳಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಕ್ಲೋಸಿಂಗ್ ಕಾಮಗಾರಿಯು ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಜೇಬು ತುಂಬಲು ಮಾಡಿದಂತಹ ಕಾಮಗಾರಿಗಳಾಗಿವೆ. ಸರಕಾರದ ಹಣ ಲೂಟಿ ಮಾಡಲು ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇಂತಹ ಕಾಮಗಾರಿಗಳಿಂದ ಯಾವುದೇ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಈ ಕಾಮಗಾರಿಯನ್ನು ತಡೆಹಿಡಿಯಬೇಕು ಹಾಗೂ 2.52 ಕೋಟಿ ಬಿಲ್ ಪಾವತಿಯನ್ನು ಸಹ ತಡೆಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.
ಎಪ್ರಿಲ್ ನಂತರ ಕಾಲುವೆಗಳಿಗೆ ನೀರು ಸ್ಥಗಿ ತಗೊಳಿಸಿದ ನಂತರ ಕಾಮಗಾರಿಯನ್ನು ಆರಂಭಿಸಬೇಕು. ರೈತರು ಜಮೀನುಗಳಲ್ಲಿ ಬೆಳೆಗಳನ್ನು ಬೆಳೆದಿದ್ದು, ಬೆಳೆಗಳು ಕೈಗೆ ಬರಲು ಏಪ್ರಿಲ್ 20ರ ವರೆಗೆ ಕಾಲುವೆಗೆ ನೀರು ಹರಿಸುವುದು ಅವಶ್ಯಕವಾಗಿದೆ. ಇಲ್ಲವಾದರೆ ಬೆಳೆಗಳು ನಾಶವಾಗಿ ರೈತರು ಸಂಕಷ್ಟ ಅನುಭವಿಸಲ್ಲಿದ್ದಾರೆ. ಕಾರಣ ಕೆಬಿಜೆಎನ್‌ ಎಲ್‌ನ ಎಲ್ಲಾ ಕಾಲುವೆಗಳಿಗೆ ಎಪ್ರಿಲ್ 20ರವರೆಗೆ ನೀರು ಹರಿಸಬೇಕೆಂದು ಅವರು ಮನವಿ ಮಾಡಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ಜಿಲ್ಲಾ ಕಾರ್ಯಾಧ್ಯಕ್ಷ ಆನಂದ ಕುಂಬಾರ್, ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ, ಉಪಾಧ್ಯಕ್ಷ ಹನುಮನಗೌಡ ಸೇರಿದಂತೆ ಇದ್ದರು

Leave a Reply

Your email address will not be published. Required fields are marked *