ಮಾನ್ವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ ಅಧ್ಯಕ್ಷರಾದ ಅರುಣ್ ಕುಮಾರ್ ಚಂದಾ ತಿಳಿಸಿದ್ದಾರೆ.
ಅವರಿಂದು ಪಟ್ಟಣದ ಪ್ರವೇಶ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಳೆದ ಬಾರಿ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಮಾತ್ರ ಈ ಶಿಬಿರವನ್ನು ಏರ್ಪಡಿಸಲಾಗಿದ್ದರೆ, ಈ ಬಾರಿ ಎಲ್ಲಾ ಜನಾಂಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ತಲಾ 100 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು. ಏಪ್ರಿಲ್ 5ರಿಂದ ಪ್ರಾರಂಭವಾಗುವ ಶಿಬಿರವು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ಒಟ್ಟು 45 ದಿನಗಳ ಕಾಲ ಪಟ್ಟಣದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಈ ಶಿಬಿರಕ್ಕೆ ಮಾರ್ಚ್ 5ರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಮೊದಲ ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಮಹಾಲಕ್ಷ್ಮಿ ಸೂಪರ್ ಮಾರ್ಕೆಟ್ ಹತ್ತಿರ ಇರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಾಲಯ ಹಾಗೂ ಮಲ್ಲಿಕಾರ್ಜುನ ಚಿತ್ರಮಂದಿರ ಪಕ್ಕದಲ್ಲಿರುವ ಹೊಯ್ಸಳ ಇನ್ಫೋಟೆಕ್ ಕೇಂದ್ರಗಳಲ್ಲಿ ಅರ್ಜಿಗಳು ದೊರೆಯಲಿವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌.ಬೋಸರಾಜ ಅವರು ಉದ್ಘಾಟಿಸಲಿದ್ದು, ವಿವಿಧ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ತರಬೇತಿ ಅವಧಿಯಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರು ವಿದ್ಯಾರ್ಥಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ.

ತಾಲೂಕ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಜಗದೀಶ್ ಓತೂರ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವು ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡುವ ಉದ್ದೇಶದಿಂದ ಈ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸುಮಾರು 10 ಜನ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಕೊಠಡಿ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ಕಾರ್ಯಾಧ್ಯಕ್ಷ ಶ್ರೀಧರಸ್ವಾಮಿ ಹಿರೇಕೊಟ್ನೆಕಲ್, ಕಾರ್ಯದರ್ಶಿ ಶಂಕ್ರಪ್ಪ ಅಂಗಡಿ ನಕ್ಕುಂದಿ, ಮುಖಂಡರಾದ ಡಾ.ಮಲ್ಲಿಕಾರ್ಜುನ ಬೊಮ್ಮನಾಳ, ಸಮಿತಿಯ ಸದಸ್ಯರಾದ ವಿಶ್ವನಾಥ್ ಪಾಟೀಲ್, ಚಂದ್ರಶೇಖರ್ ಕುಂಬಾರ, ಹೊಯ್ಸಳ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *