ಮಸ್ಕಿ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ 3೦೦ ಕೋಟಿ ಭೋವಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಡಬೇಕೆಂದು ಅಖಿಲ ಕರ್ನಾಟಕ ಸಿದ್ಧರಾಮೇಶ್ವರ ಭೋವಿ(ವಡ್ಡರ) ಸಂಘಟನೆ ಜಿಲ್ಲಾಧ್ಯಕ್ಷ ರವಿಕುಮಾರ ಚಿಗರಿ ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು, ಅಭಿವೃದ್ಧಿ ನಿಗಮದಲ್ಲಿ ಈಗಾಗಲೇ ಸರ್ಕಾರ ಸೌಲಭ್ಯಗಳನ್ನು ಪಡೆದವರು ಮತ್ತೆ ಫಲಾನುಭವಿಗಳಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ದಾಖಲೆಗಳನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ನಿಗಮದಿಂದ ದೊರೆಯುವಂತಹ ಸರಕಾರದ ಸೌಲಭ್ಯಗಳ ಬಗ್ಗೆ ಸಮಾಜದವರಿಗೆ ಕಾರ್ಯಗಾರಗಳನ್ನು ಹಮ್ಮಿಕೊಂಡಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯುತ್ತದೆ. ಅನ್ಯ ಜಾತಿಯವರು ಭೋವಿ ಮತ್ತು ವಡ್ಡರ ಎಂದು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ನಿಗಮದಿಂದ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ನಿಗಮದ ಅಧಿಕಾರಿಗಳು ತನಿಖೆ ನಡೆಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಭೋವಿ ಜನಾಂದವರು ಮೊದಲಿನಿಂದಲೂ ಕಲ್ಲು ಬಂಡೆಗಳನ್ನು ಹೊಡೆಯುವ ಕುಲ ಕಸುಬು ನಡೆಸಿಕೊಂಡು ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭೋವಿ ಸಮಾಜದವರಿಗೆ ಗುಡ್ಡ ಗಾಡು ಪ್ರದೇಶದಲ್ಲಿ ಕಲ್ಲು, ಬಂಡೆಗಳನ್ನು ಹೊಡೆಯಲು ಅನುಮತಿ ನೀಡಬೇಕು. ಜತೆಗೆ ಭೋವಿ ಅಭಿವೃದ್ಧಿ ನಿಗಮದ ಬದಲಾಗಿ ಭೋವಿ ವಡ್ಡರ ಅಭಿವೃದ್ಧಿ ನಿಗಮವೆಂದು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೀರೇಶ ಆನೆಹೊಸುರು, ಮಲ್ಲಯ್ಯ ನಾಗರಾಳ, ರಂಗಪ್ಪ ಅರಕೇರಿ, ತಿಮ್ಮಣ್ಣ ಗುಡಸಿಲಿ, ಹನುಮಂತ ನಾಗರಾಳ, ಮಲ್ಲಪ್ಪ ಮೆದಿಕಿನಾಳ, ನಾಗರಾಜ ಸೇರಿದಂತೆ ಇನ್ನಿತರರಿದ್ದರು.

