ಮಾನ್ವಿ : ತಾಲ್ಲೂಕಿನ ಹೆಮ್ಮೆಯ ಗ್ರಾಮ, ಸೈನಿಕರ ನೆಲೆ ಎಂದೇ ಖ್ಯಾತಿಯಾದ ನೀರಮಾನ್ವಿ ಗ್ರಾಮದಲ್ಲಿ ಫೆಬ್ರವರಿ 28ರಂದು 11ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಸಡಗರದಿಂದ ಜರುಗಲಿದೆ. ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ನಡೆಯಲಿರುವ ಈ ಅಕ್ಷರ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.ದೇಶದ ರಕ್ಷಣೆಗಾಗಿ ಈಗಾಗಲೇ 17 ಯೋಧರನ್ನು ನೀಡಿರುವ ನೀರಮಾನ್ವಿ ಗ್ರಾಮದ 14 ಯುವಕರು (ಒಬ್ಬ ಯುವತಿ ಸೇರಿದಂತೆ) ಪ್ರಸ್ತುತ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ನಾಡಿನ ಹೆಸರಾಂತ ಕತೆಗಾರ ದಿವಂಗತ ರಾಜಶೇಖರ ನೀರಮಾನ್ವಿ ಅವರ ಜನ್ಮಭೂಮಿಯಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ವಿಶೇಷ.ವೈಚಾರಿಕ ಚಿಂತನೆಯ ಲೇಖಕ, ಹಿರಿಯ ಸಾಹಿತಿ ಹಾಗೂ ವೈದ್ಯರಾದ ಡಾ. ಬಸವಪ್ರಭು ಪಾಟೀಲ ಬೆಟ್ಟದೂರು ಅವರು ಈ ಬಾರಿಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಇವರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾಗಿದ್ದು, ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ ಅನುಭವ ಹೊಂದಿದ್ದಾರೆ.
ಸಿದ್ಧತೆ ಮತ್ತು ಸೌಲಭ್ಯಗಳು:
ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ಗ್ರಾಮದಾದ್ಯಂತ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ.
“ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗಾಗಿ 1,500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅತಿಥಿಗಳಿಗೆ ಮತ್ತು ಸಾಹಿತ್ಯಾಸಕ್ತರಿಗೆ ಅಚ್ಚುಕಟ್ಟಾದ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ,” ಎಂದು ಸ್ವಾಗತ ಸಮಿತಿಯ ಕೋಶಾಧ್ಯಕ್ಷರಾದ ಎಚ್. ಶರ್ಪುದ್ದೀನ್ ಪೋತ್ನಾಳ ತಿಳಿಸಿದ್ದಾರೆ.
ಈ ಸಾಹಿತ್ಯ ಸಮ್ಮೇಳನವು ವೈಚಾರಿಕ ಮತ್ತು ಸಾಂಸ್ಕೃತಿಕ ಚಿಂತನೆಗಳಿಗೆ ವೇದಿಕೆಯಾಗಲಿದ್ದು, ತಾಲ್ಲೂಕಿನ ಸಮಸ್ತ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಕೋರಿದ್ದಾರೆ.

Leave a Reply

Your email address will not be published. Required fields are marked *