ಮಸ್ಕಿ: ಯಾವುದೇ ಹಬ್ಬಗಳಿರಲಿ ಹಿಂದೂ-ಮುಸ್ಲಿಂರು ಭಾವೈಕತೆಯಿಂದ ಆಚರಿಸಿದಾಗ ಮಾತ್ರ ಹಬ್ಬಗಳು ಯಶಸ್ವಿಯಾಗುತ್ತವೆ ಎಂದು ಪಿಎಸ್‌ಐ ರಂಗಯ್ಯ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳ ಹಬ್ಬಗಳನ್ನು ಪ್ರತಿಯೊಬ್ಬರು ಸಹೋದರತ್ವ ಭಾವನೆಗಳನ್ನು ಇಟ್ಟುಕೊಂಡು ಹಬ್ಬಗಳನ್ನು ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಮೀರಿ ವರ್ತಿಸಿದರೆ ಯಾವುದೇ ಮುಲಾಜಿಲ್ಲದೆ ಕಾನೂನಿನ ಕ್ರಮ ಜರುಗಿಸಲಾಗುವುದು. ಪ್ರತಿಯೊಬ್ಬರು ಸಹ ಹಿರಿಯರ ಮಾರ್ಗದ ದರ್ಶನದಂತೆ ನಡೆದುಕೊಳ್ಳಬೇಕು. ಈ ಹಿಂದಿನಿಂದಲೂ ಹಿರಿಯರು ಪಟ್ಟಣದಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ಸೌಹಾರ್ದತೆಯನ್ನು ಮುಂದಿನ ಯುವಪೀಳಿಗೆಯೂ ಸಹ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕೆಂದರು. ಪ್ರತಿಯೊಂದು ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಿ ಅದಕ್ಕೆ ಬೇಕಾದ ಪೊಲೀಸ್ ಬಂದೋಬಸ್ತನ್ನು ಇಲಾಖೆ ವತಿಯಿಂದ ಕೈಗೊಳ್ಳಲಾಗುವುದು ಒಂದು ವೇಳೆ ಕಾನೂನು ಮೀರಿ ಯಾರಾದರೂ ನಡೆದುಕೊಂಡರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳಿದ್ದರು.
ಮಸ್ಕಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಹೋಳಿ ಮತ್ತು ರಂಜಾನ್ ಹಬ್ಬದ ಅಂಗವಾಗಿ ಶಾಂತಿ ಸಭೆ ನಡೆಯಿತು.

