ರಾಯಚೂರು ಫೆಬ್ರವರಿ 27 (ಕರ್ನಾಟಕ ವಾರ್ತೆ): ಇತ್ತೀಚಿಗೆ ನಗರದ ಚಂದ್ರಬಂಡ ರಸ್ತೆಯ ಜಲಾಲ್‌ನಗರ ಬಡಾವಣೆ ಬಳಿಯ ತಿಪ್ಪೆಯಲ್ಲಿ ಪತ್ತೆಯಾದ ಔಷಧಿಗಳು ಕುರಿತು ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ರಾಯಚೂರಲ್ಲಿ ಅವಧಿ ಇರುವ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ತಿಪ್ಪೆಗೆ ಬಿಸಾಕಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಎನ್ನುವ ವಿಷಯವು ಪ್ರಕಟವಾಗಿದ್ದು, ಈ ಸುದ್ದಿಯು ಆರೋಗ್ಯ ಇಲಾಖೆಗೆ ಸಂಬಂಧಿಸಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಸ್ಪಷ್ಟಿಕರಣ ನೀಡಿದ್ದಾರೆ.
ಫೆ.22ರಂದು ರಾಯಚೂರಲ್ಲಿ ಅವಧಿ ಇರುವ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ತಿಪ್ಪೆಗೆ ಬಿಸಾಕಿದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಎನ್ನುವ ವಿಷಯವು ಪ್ರಕಟವಾಗಿರುತ್ತದೆ. ಈ ವಿಷಯದ ಗಂಭೀರತೆ ಅನ್ವಯ ತಕ್ಷಣ ಈ ಕುರಿತು ತನಿಖಾ ತಂಡವನ್ನು ರಚನೆ ಮಾಡಲಾಯಿತು.
ತಂಡವು ಔಷಧಿ ಪತ್ತೆಯಾದ ಸ್ಥಳದಲ್ಲಿ ಹಾಗೂ ಎಲ್ಲ ಔಷಧಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮ ವರದಿಯನ್ನು ಸಲ್ಲಿಸಿರುತ್ತದೆ. ಅಂತಿಮ ವರದಿಯ ಪ್ರಕಾರ ಚಂದ್ರಬಂಡ ರಸ್ತೆಯ ಜಲಾಲ್‌ನಗರ ಬಡಾವಣೆ ಬಳಿ ಬಿಸಾಕಿರುವ ಸಿರಿಂಜ್‌ಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬAಧ ಪಟ್ಟಿರುವುದಿಲ್ಲ. ಅಲ್ಲದೆ ಕೆಲವೊಂದು ಸಿರಪ್, ಟಾನಿಕ್ಸ್ ಬಾಟಲ್ಸ್ ಗಳು ಸಿಕ್ಕಿದ್ದು, ಈ ವಸ್ತುಗಳು ಫೀಜಿಷಿಯನ್ ಸ್ಯಾಂಪಲ್ ಇರುವುದು ಕಂಡುಬಂದಿದ್ದು, ಈ ಔಷಧಿಗಳೆಲ್ಲವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟಿಲ್ಲವೆಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಸಹಾಯಕ ಔಷಧ ನಿಯಂತ್ರಕ ಅಧಿಕಾರಿಗಳು ಕಚೇರಿ ಹಾಗೂ ಪರಿಸರ ಮಾಲಿನ್ಯ ಇಲಾಖೆ ವತಿಯಿಂದ ಮುಂದಿನ ಕ್ರಮ ತೆಗೆದುಕೊಳ್ಳುವವರು ಎಂದು ವರದಿಯಲ್ಲಿ ತಿಳಿಸಲಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ಅವರು ಪ್ರಕಟಣೆಯಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *