ವೈದ್ಯಕಿಯ ಶಿಕ್ಷಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಮೆಡಿಕಲ್ ಕಾಲೇಜು, ಆಸ್ಪತ್ರೆ ಸೇರಿ ಯಾವುದೇ ಕಾಮಗಾರಿಗೆ ಹಣಕಾಸಿನ ತೊಂದರೆ ಇಲ್ಲ ಎಂದು ವೈದ್ಯಕಿಯ ಶಿಕ್ಷಣ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸ್ಪಷ್ಟಪಡಿಸಿದರು.ಕಲಬುರಗಿ ಜಿಮ್ಸ್ ಸೇರಿ ವಿವಿಧ ಆಸ್ಪತ್ರೆ ಕಟ್ಟಡ ಕಾಮಗಾರಿ ಪರಿಶೀಲಿಸಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಲಾಖೆ ಅಡಿ ಅನೇಕ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳ ಕಟ್ಟಡ ಕಾಮಗಾರಿ ಶುರುವಾಗಿವೆ.
ಯಾವುದಕ್ಕೂ ಹಣಕಾಸಿನ ತೊಂದರೆ ಎದುರಾಗಿಲ್ಲ. ಎಲ್ಲವೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿವೆ ಎಂದು ಹೇಳಿದರು.
ಜಿಲ್ಲೆಗೊಂದು ಮೆಡಿಕಲ್ ಕಾಲೇಜುರಾಜ್ಯದ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕಿಯ ಕಾಲೇಜು ಪ್ರಾರಂಭಿಸಲು ಯೋಜಿಸಲಾಗಿದ್ದು, ಈಗಾಗಲೇ 22 ಜಿಲ್ಲೆಗಳಲ್ಲಿ ಕಾಲೇಜು ಪ್ರಾರಂಭವಾಗಿವೆ. ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರಾರಂಭವಾಗಲಿವೆ. ಕಾರವಾರ, ಹಾವೇರಿ, ಗದಗ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡ ಶುರುವಾಗಿದೆ. ಮಂಡ್ಯ, ತುಮಕೂರು ಉದ್ಘಾಟನೆಗೊಂಡಿವೆ. ಶಿವಮೊಗ್ಗ, ಮೈಸೂರು ಆರು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿವೆ. ಬೆಳಗಾವಿ ಜಿಲ್ಲೆಯಲ್ಲಿ ಅಡಿಗಲ್ಲು ಹಂತದಲ್ಲಿದೆ. ಚಾಮರಾಜನಗರ, ಕೊಡುಗು ಜಿಲ್ಲೆ ಸೇರಿ ಕೆಲ ಕಡೆ ಪ್ರಸ್ತಾವನೆ ಹಂತದಲ್ಲಿವೆ ಎಂದು ವಿವರಿಸಿದರು.
ಕ್ರಿಟಿಕೇರ್ ಯುನಿಟ್
ಕಲಬುರಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ರಸಕ್ತ 90 ಹಾಸಿಗೆ ವ್ಯವಸ್ಥೆ ಇದ್ದು, ಇನ್ನೂ 200 ಹಾಸಿಗೆ ಸೇರಿ 300 ಬೆಡ್ ಆಸ್ಪತ್ರೆ ಮಾಡಲಾಗುತ್ತಿದ್ದು, ಕಾಮಗಾರಿ ನಡೆದಿದೆ. ಅಕ್ಟೋಬರ್ನಲ್ಲಿ ಪೂರ್ಣಗೊಳ್ಳಲಿವೆ. 50 ಬೆಡ್ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಯುನಿಟ್ ಕಾಮಗಾರಿ ಅಕ್ಟೋಬರ್ನಲ್ಲಿ ಮುಗಿಯಲಿದೆ. 200 ಹಾಸಿಗೆ ಸಾಮರ್ಥ್ಯದ ತಾಯಿ ಮಕ್ಕಳ ಆಸ್ಪತ್ರೆ ಕಾಮಗಾರಿ ಅಕ್ಟೋಬರ್ವರೆಗೆ ಪೂರ್ಣಗೊಳ್ಳಲಿದೆ. ಜಿಮ್ಸ್ ಆಸ್ಪತ್ರೆ ಆವರಣದಲ್ಲೇ ನಾಲ್ಕು ಆಸ್ಪತ್ರೆಗಳು ನಡೆಯುತ್ತಿವೆ ಎಂದು ವಿವರಿಸಿದರು.
ಬಹುಕೌಶಲ ಅಭಿವೃದ್ಧಿ ಕೇಂದ್ರ
ಗುಲ್ಬರ್ಗ ವಿಶ್ವವಿದ್ಯಾಲಯದ ಬಳಿ 10 ಎಕರೆ ಪ್ರದೇಶದಲ್ಲಿ 150 ಬೆಡ್ ಸಾಮರ್ಥ್ಯದ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಲೆಎತ್ತಲಿದೆ. 100 ಹಾಸಿಗೆ ಸಾಮರ್ಥ್ಯದ ನಿಮಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದೆ. ವಿಶ್ವವಿದ್ಯಾಲಯ 25 ಎಕರೆ ಪ್ರದೇಶದಲ್ಲಿ ಬಹುಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಈಗಿರುವ ಐಟಿಐ ಕಾಲೇಜು ಕಟ್ಟಡ ಸಂಪೂರ್ಣ ಹಳೆಯದಾಗಿದ್ದು, ಹೊಸ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರತಿ ವಿಭಾಗಕ್ಕೊಂದು ಜಯದೇವ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಕಲಬುರಗಿ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ, ಬೆಳಗಾವಿ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿವೆ.ಕಲಬುರಗಿ, ರಾಯಚೂರು, ಬಳ್ಳಾರಿ, ಮೈಸೂರು, ಬೆಳಗಾವಿಯಲ್ಲಿ ಟ್ರಾಮಾ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿವೆ. ಬಡವರು, ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಇಷ್ಟೊಂದು ಪ್ರಮಾಣದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದೆ.

