ಫೆ.28ರಂದು ನಗರದ ಶಾದಿ ಮಹಲ್ ನಲ್ಲಿ ಸಿಪಿಐ (ಎಂಎಲ್)ರೆಡ್ ಸ್ಟಾರ್ ಕಮ್ಯುನಿಸ್ಟ್ ಪಕ್ಷದ ವತಿಯಿಂದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ವಿಚಾರ ಸಂಕಿರಣದಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕಮ್ಯುನಿಷ್ಟರ ಪಾತ್ರ ಹಾಗೂ ಜಾತಿ ನಿರ್ಮೂಲನೆಗಾಗಿ ಮಾರ್ಕ್ಸ್ವಾದಿ ಹಾಗೂ ಅಂಬೇಡ್ಕರ್ ವಾದಿಗಳ ಐಕ್ಯತೆ ಸವಾಲುಗಳು ಎಂಬ ಎರಡು ಮಹತ್ವದ ರಾಷ್ಟ್ರೀಯ ವಿಷಯಗಳ ಮೇಲೆ ವಿಷಯ ಮಂಡನೆ ಹಾಗೂ ಚರ್ಚೆ ನಡೆಯಲಿದೆ ಎಂದು ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಷಯ ಮಂಡನೆಗಾಗಿ ಕಮ್ಯುನಿಸ್ಟ್ ಪಕ್ಷದ ಪಾಲಿಟಿ ಬ್ಯುರೊ ಸದಸ್ಯರಾದ ಆರ್.ಮಾನಸಯ್ಯ, ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಬಿ.ರುದ್ರಯ್ಯ ಭಾಗವಹಿಸಲಿದ್ದಾರೆ. ಹಾಗೂ  ಉಪನ್ಯಾಸಕರು ಪ್ರಗತಿಪರ ಚಿಂತಕರು ನಾರಾಯಣ ಬೆಳಗುರ್ಕಿ, ಸಾಮಾಜಿಕ ಹೋರಾಟಗಾರ ಹಾಗೂ ಸಾಂಸ್ಕೃತಿಕ ಚಿಂತಕ ಹೆಚ್.ಎನ್.ಬಡಿಗೇರ್ ಸಂವಾದಕರಾಗಿ ಮಾತನಾಡಲಿದ್ದಾರೆ.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಡಿ ಅಮೀರ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ರೈತರು ಕಾರ್ಮಿಕರು ಆದಿವಾಸಿಗಳನ್ನು ಸಂಘಟಿಸಿ ಬಹುದೊಡ್ಡ ಬಲಿದಾನ ಮಾಡಿದ ಕಮ್ಯುನಿಷ್ಟರ ಪಾತ್ರವನ್ನು ಇಂದು ಬಲಪಂಥೀಯ ಉಗ್ರವಾದಿ ಚಿಂತಕರು ಹಾಗೂ ಪ್ರಚಾರಕರು ಯೋಜನಾ ಬದ್ಧವಾಗಿ ಗೌಣಗೊಳಿಸುತ್ತಿದ್ದಾರೆ. ಅಲ್ಲದೇ ಸ್ವಾತಂತ್ರ್ಯ ಚಳುವಳಿಯಲ್ಲಿ ಕಮ್ಯುನಿಸ್ಟರು ಎಂತಹ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆಂಬ ಸತ್ಯಾಂಶವು ಹೊಸ ತಲೆಮಾರಿನ ಜನಗಳಿಗೆ ಅಪರಿಚಿತವಾಗಿದೆ.

ಸ್ವಾತಂತ್ರ್ಯ ಚಳುವಳಿ ಅಶೋತ್ತರಗಳು ಇದುವರೆಗೂ ಈಡೇರದೆ ಹೋದ ವಾಸ್ತವನ್ನು ಚರ್ಚಿಸಬೇಕಾಗಿದೆ.
ಈ ಮೂಲಕ ದುಡಿಯುವರ್ಗ ಹಾಗು ದಮನಿತ ಜನಗಳ ವಿಮಕ್ತಿಗಾಗಿ ಅಪೂರ್ಣಗೊಂಡ ಸ್ವಾತಂತ್ರ್ಯ ಚಳುವಳಿಯನ್ನು ಇಂದು ಮುಂದುವರಿಸಬೇಕಾಗಿದೆ. ಭಾರತ ಸಮಾಜದ ಸಮಗ್ರ ಬದಲಾವಣೆ ಚಳುವಳಿಯು ಜಾತಿ ನಿರ್ಮೂಲನೆಯಾಗದೆ ಅಸಾಧ್ಯ ಎಂಬ ಪರಮ ಸತ್ಯವನ್ನು ನಾವೆಲ್ಲರೂ ಕೂಡ ಮನಗಾಣಬೇಕಾಗಿದೆ.

ಭಾರತದ ಸಾಮಾಜಿಕ ಸಂರಚನೆಯು ರಷಿಯಾ ಹಾಗೂ ಚೀನಾಕ್ಕಿಂತ ಭಿನ್ನವಾಗಿದೆ. ಇಲ್ಲಿನ ಜಾತಿ ವ್ಯವಸ್ಥೆ ವರ್ಗ ಶೋಷಣೆಯ ಅವಿಭಾಜ್ಯ ಅಂಗವಾಗಿದೆ. ವರ್ಗ ಹಾಗೂ ಜಾತಿಯನ್ನು ಯಾಂತ್ರಿಕವಾಗಿ ಪ್ರತ್ಯೇಕಿಸುವ ತಪ್ಪಾದ ಧೋರಣೆಯನ್ನು ಕಮ್ಯುನಿಸ್ಟ್ ಚಳುವಳಿಯಲ್ಲಿ ಅನುಸರಿಸಲಾಗಿದೆ. ಇದನ್ನು ತಿದ್ದಿಕೊಳ್ಳದೆ, ಜಾತಿ ಹಾಗೂ ವರ್ಗ ಒಂದರಿಂದ ಮತ್ತೊಂದು ಪ್ರತ್ಯೇಕ ಗೊಳ್ಳದ ಜಂಟಿ ಸವಾಲ್ ಎಂದು ಕಮ್ಯುನಿಸ್ಟ್ ಪಕ್ಷಗಳು ಪುನರ್ ಮನನ ಮಾಡಿಕೊಳ್ಳಬೇಕಾಗಿದೆ.

ಇದಕ್ಕಾಗಿ ಮಾರ್ಕ್ಸ್ವಾದಿಗಳು ಹಾಗೂ ಅಂಬೇಡ್ಕರ್ ವಾದಿಗಳೊಂದಿಗೆ ಐಕ್ಯ ಹೋರಾಟ ಕಟ್ಟಲು ಅಡ್ಡ ಬರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಾಗಿದೆ.
ಇಂಥದೊಂದು ಮಹತ್ವದ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಹಾಗಾಗಿ ಎಲ್ಲಾ ಪ್ರಗತಿಪರ ಸ್ನೇಹಿತರು, ಅದರಲ್ಲೂ ವಿವಿಧ ಕಮ್ಯುನಿಸ್ಟ್ ಪಕ್ಷಗಳ, ವಿವಿಧ ದಲಿತ ಸಂಘಟನೆಗಳ ಚಿಂತಕರು, ಮುಂದಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.

ಈ ವೇಳೆ: ಸಿಪಿಐಎಂಎಲ್ ರೆಡ್ ಸ್ಟಾರ್ ಪಾರ್ಟಿ ಜಿಲ್ಲಾ ಸಮಿತಿ ಸದಸ್ಯರಾದ, ಆದೇಶ ಹಿರೇನಗನೂರ, ಯಲ್ಲಪ್ಪ ಊಟಕನೂರು, ಹೆಚ್.ಆರ್.ಹೊಸಮನಿ, ತಾಲೂಕು ಸಮಿತಿ ಸದಸ್ಯ ಮುದಿಯಪ್ಪ ಹೆಚ್.ಎನ್.ಕ್ಯಾಂಪ್,  ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *