ನಾಲ್ಕು ದಶಕಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರ
ಅಂಗನವಾಡಿ ಕಾರ್ಯಕರ್ತೆಯರನ್ನು ಸಹಾಯಕರನ್ನು ಗಮನಿಸದೆ, ಗ್ರಾಚ್ಯುಟಿ, ಪೆನ್ಸನ್, ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಲ್ಲದೆ ಇಂದಿನ ಬೆಲೆ ಏರಿಕೆಯು ಜೀವನ ನಿರ್ವಹಣೆಗೆ ಹೊರೆಯಾಗುತ್ತಿದೆ ಕನಿಷ್ಠ ಕೂಲಿಯನ್ನು ಸಹ ಕೊಡದೆ ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಸಂಗಯ್ಯಸ್ವಾಮಿ ಹಿರೇಮಠ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಬರುವ ಪೂರ್ವದಲ್ಲಿ ಪ್ರಿಯಾಂಕ ಗಾಂಧಿ ಕಾನ್ಪುರದಲ್ಲಿ 6ನೇ ಗ್ಯಾರಂಟಿಯನ್ನಾಗಿ ಘೋಷಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಗೌರವ ಧನ ಹೆಚ್ಚಿಸುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ತಾವೇ ಹೇಳಿದ ಮಾತುಗಳನ್ನು ಮರೆತರೇಕೆ ಎಂದು ಪ್ರಶ್ನಿಸಿದರು

ನಂತರ ರಾಜ್ಯ ಉಪಾಧ್ಯಕ್ಷ ತಿಪ್ಪಯ್ಯಶೆಟ್ಟಿ ಮಾತನಾಡಿ,
ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 2011ರಿಂದ ನಿವೃತ್ತರಾಗಿರುವ ವಯೋವೃದ್ಧ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ, ನಿವೃತ್ತಿ ಪಡೆದವರಿಗೂ ಗ್ರಾಚ್ಯುಟಿ ಅನಕೂಲ ಕಲ್ಪಿಸಬೇಕೆನ್ನುವ ಬೇಡಿಕೆ ಸೇರಿದಂತೆ ಇನ್ನಿತರೇ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 2ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಜಿಲ್ಲಾ ಗೌರವಾಧ್ಯಕ್ಷ ಡಿ.ಎಚ್‌.ಕಂಬಳಿ ಮಾತನಾಡಿ,
ಅಂಗನವಾಡಿ ಕೇಂದ್ರದ ಕೆಲಸದ ಜವಾಬ್ದಾರಿಯೊಂದಿಗೆ ಹೆಚ್ಚುವರಿಯಾಗಿ ಹಾಗೂ ಬಲವಂತವಾಗಿ ಬಿಎಲ್ ಓ ಸೇರಿ ಇನ್ನಿತರೆ ಜವಾಬ್ದಾರಿ ಹೊರಿಸುತ್ತಿರುವುದರಿಂದ ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ, ಹಾಗೂ ಸಹಾಯಕಿಯರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಬಹಳ ಸಮಸ್ಯೆಯಾಗುತ್ತಿದೆ. ಬಿಎಲ್‌ಓ ಜವಾಬ್ದಾರಿ ನಿರಾಕರಿಸುವ ಕಾರ್ಯಕರ್ತೆಯರಿಗೆ ಶಿಸ್ತು ಕ್ರಮ ಜರುಗಿಸುತ್ತಿರುವುದು ಕೂಡ ಸರಿಯಲ್ಲ. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಲು ಅವಕಾಶ ಕೊಟ್ಟ ಕಾರಣ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲ ಆಶಯಗಳನ್ನ ಗಾಳಿಗೆ ತೂರಿದಂತಿದೆ.

ಕಾರಣ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌.ಕೆಜಿ ಮತ್ತು ಯುಕೆಜಿಗಳನ್ನು ಪ್ರಾರಂಭಿಸಿ ಅಂಗನವಾಡಿಗೆ ಬರುವ ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ತಯಾರಿಸಿ ಬಡಿಸಲು ಒಬ್ಬ ವಿದ್ಯಾರ್ಥಿಗೆ ತರಕಾರಿ ವೆಚ್ಚ ಕೇವಲ 50 ಪೈಸೆ ಕೊಡುತ್ತಿದೆ ಸರ್ಕಾರ ಇದನ್ನು ಬೆಲೆ ಏರಿಕೆಗೆ ತಕ್ಕಂತೆ ಹೆಚ್ಚಿಸಬೇಕು ಎಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಮಾರ್ಚ್ 2 ಮತ್ತು 3ರಂದು  ನಡೆಯುವ ಬೃಹತ್ ಹೋರಾಟದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.

ತದನಂತರ ತಾಲೂಕು ಅಧ್ಯಕ್ಷೆ ಗಿರಿಜಮ್ಮ ಮಾತನಾಡಿ,
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಡಿ.ಎ.30 ರೂ.ಇರುವುದನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸಬೇಕು, ಇದನ್ನು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವವರಿಗೂ ವಿಸ್ತರಿಸಬೇಕು. ಮಾತೃವಂದನ, ಭಾಗ್ಯಲಕ್ಷ್ಮಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಅನೇಕ ಅಂಗನವಾಡಿ ಕೇಂದ್ರಗಳ ಬಾಡಿಗೆಯನ್ನು ಪ್ರತಿ ತಿಂಗಳು ಕಾಲಕಾಲಕ್ಕೆ ಬಿಡುಗಡೆ ಮಾಡಬೇಕು. ಬಾಡಿಗೆ ಕಟ್ಟಡಗಳನ್ನು ಪಡೆಯಲು ಅಗತ್ಯವಾದ ಮುಂಗಡ ಹಣ ಬಿಡುಗಡೆ ಮಾಡಬೇಕು.

ಕೇಂದ್ರ ಸರ್ಕಾರ ಅನುಮೋದನೆ ನೀಡದೆ ಇರುವ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಹಣ ಮತ್ತು ಪೋಷನ್ ಅಭಿಯಾನದ ಪ್ರೋತ್ಸಾಹ ಧನವನ್ನು ನೀಡುವಂತೆ ಕ್ರಮ ಕೈಗೊಳ್ಳಬೇಕು. ಅನಾರೋಗ್ಯಕ್ಕೆ ತುತ್ತಾಗುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸೆಗಾಗಿ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. ಅನಾರೋಗ್ಯಕ್ಕೆ ಒಳಗಾದ ಅವಧಿಯನ್ನು ವೇತನ ಸಹಿತ ವೈದ್ಯಕೀಯ ರಜೆ ಎಂದು ಪರಿಗಣಿಸಬೇಕು. ಕಾರ್ಯಕರ್ತೆಯರ ಮಾಸಿಕ ಭತ್ಯೆ 50 ರೂ.ಕೊಡುತ್ತಿದ್ದು, ಇದನ್ನು ಕೂಡ ಹೆಚ್ಚಿಸಬೇಕು ಮೊಟ್ಟೆಯ ದರ ಏರುಪೇರು ಆಗುತ್ತಿದ್ದು, ಮಾರುಕಟ್ಟೆಯ ದರ ಹೆಚ್ಚಳಕ್ಕೆ ಅನುಗುಣವಾಗಿ ಮೊಟ್ಟೆಯ ಹಣವನ್ನು ಬಿಡುಗಡೆ ಮಾಡಬೇಕು.

ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ನೇಮಕ ಮಾಡುವ ಸಂದರ್ಭದಲ್ಲಿ ವಾಸ ಸ್ಥಳಕ್ಕೆ ಇರುವ ನಿಯಮವನ್ನು ಸಡಿಲಿಸಬೇಕು. ಅಂಗನವಾಡಿ ಕೇಂದ್ರಗಳ ನಿರ್ವಹಣೆಗಾಗಿ ಬಿಡುಗಡೆಗೊಳಿಸುತ್ತಿರುವ 2 ಸಾವಿರ ಸಾದಿಲ್ವಾರು ಹಣವನ್ನು ಇನ್ನಿತರೆ ಅನೇಕ ಕಾರ್ಯಕ್ರಮಗಳಿಗೂ ಕೂಡ ಬಳಕೆ ಮಾಡಲು ಸೂಚಿಸುತ್ತಿರುವುದರಿಂದ ಸಾದಿಲ್ವಾರು ಹಣ ಬಳಕೆಯ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಈ ವೇಳೆ: ರಾಜ್ಯ ಉಪಾಧ್ಯಕ್ಷ ತಿಪ್ಪಯ್ಯಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಆದಿಲಕ್ಷ್ಮಿ ಪ್ರಧಾನ ಕಾರ್ಯದರ್ಶಿ, ಮಾನ್ವಿ ಮಹಾಂತಮ್ಮ, ರತ್ನಮ್ಮ ತುರ್ವಿಹಾಳ, ಲಕ್ಷ್ಮಿ ತಾಲೂಕು ಖಜಾಂಚಿ, ಯಮುನಮ್ಮ ಸಹ ಖಜಾಂಚಿ, ಜಿಲ್ಲಾ ಮಹಿಳಾ ಸದಸ್ಯೆ ಸಾವಿತ್ರಿ, ಹಾಗೂ ಲಿಂಗರಾಜ ಕೊಪ್ಪಳ, ಸೇರಿದಂತೆ

ಅನೇಕರಿದ್ದರು.

Leave a Reply

Your email address will not be published. Required fields are marked *