ರಾಯಚೂರು ಫೆಬ್ರವರಿ 25 (ಕರ್ನಾಟಕ ವಾರ್ತೆ): ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಗಟು ಗೋದಾಮುಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಆಹಾರ ಧಾನ್ಯಗಳನ್ನು ತಾಲ್ಲೂಕವಾರು ಫೆ.26ರಿಂದ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕೋರಿದ್ದಾರೆ.
ದೇವದುರ್ಗ ತಾಲೂಕಿನಲ್ಲಿ 258.96 ಕ್ವಿಂಟಾಲ್ ಅಕ್ಕಿ, ಲಿಂಗಸುಗೂರು ತಾಲೂಕಿನಲ್ಲಿ 216.00 ಕ್ವಿಂಟಾಲ್ ಅಕ್ಕಿ, ಮಾನವಿ ತಾಲೂಕಿನಲ್ಲಿ 88.20 ಕ್ವಿಂಟಾಲ್ ಅಕ್ಕಿ ಹಾಗೂ 22.50 ಕ್ವಿಂಟಾಲ್ ಜೋಳ, ರಾಯಚೂರು ತಾಲೂಕಿನಲ್ಲಿ 780.33 ಕ್ವಿಂಟಾಲ್ ಅಕ್ಕಿ ಹಾಗೂ 1.60 ಕ್ವಿಂಟಾಲ್ ಜೋಳ, ಸಿಂಧನೂರು ತಾಲೂಕಿನಲ್ಲಿ 1393.60 ಕ್ವಿಂಟಾಲ್ ಅಕ್ಕಿ ಹಾಗೂ 217.78 ಕ್ವಿಂಟಾಲ್ ಜೋಳ ಸೇರಿದಂತೆ ಒಟ್ಟು 2737.09 ಕ್ವಿಂಟಾಲ್ ಅಕ್ಕಿ ಹಾಗೂ 241.88 ಕ್ವಿಂಟಾಲ್ ಜೋಳ ಧಾನ್ಯಗಳನ್ನು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದೆ.
ಆಹಾರ ಧಾನ್ಯಗಳು ಆಯಾ ತಾಲ್ಲೂಕಿನ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆಗಳಲ್ಲಿ ಲಭ್ಯವಿದ್ದು, ಈ ದಾಸ್ತಾನನ್ನು ಎಲ್ಲಾ ತಾಲ್ಲೂಕುಗಳಲ್ಲಿ ಫೆ.26ರಂದು ಬಹಿರಂಗ ಹರಾಜನ್ನು ನಿಗದಿಪಡಿಸಲಾಗಿದೆ.
ಷರತ್ತುಗಳು: ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಎಪಿಎಂಸಿ ಪರವಾನಿಗೆದಾರರು ಅಥವಾ ಪರವಾನಿಗೆ ಪಡೆದ ಸಗಟು/ಚಿಲ್ಲರೆ ವ್ಯಾಪಾರಿಗಳು, ಕಮಿಷನ್ ಏಜೆಂಟರ್, ಅಕ್ಕಿ ಗಿರಣಿ ಮಾಲೀಕರು ಹಾಗೂ ದೊಡ್ಡ ಪ್ರಮಾಣದಾರ ಬಳಕೆದಾರ ಸಂಸ್ಥೆಗಳು ಆಗಿರಬೇಕು. ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಬಹಿರಂಗ ಹರಾಜು ದಿನ ಪೂರ್ವಾಹ್ನ 10 ಘಂಟೆಗೆ ಹರಾಜು ಸ್ಥಳದಲ್ಲಿ ಹಾಜರಾಗಿ ಹೆಸರನ್ನು ನೋಂದಾಯಿಸುವುದು ಹಾಗೂ ರೂ. 20,000/- (ಇಪತ್ತು ಸಾವಿರ) ಇ.ಎಂ.ಡಿ ಮೊತ್ತವನ್ನು ಮುಂಗಡವಾಗಿ ಪಾವತಿಸಬೇಕು. ಇ.ಎಂ.ಡಿ ಮೊತ್ತವನ್ನು ಜಿಲ್ಲಾಧಿಕಾರಿಗಳು ರಾಯಚೂರುರವರ ಹೆಸರಿನಲ್ಲಿ ಡಿಡಿ ಮೂಲಕ ಪಾವತಿಸತಕ್ಕದ್ದು. ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಎರಡು ಪಾಸ್ ಪೋರ್ಟ್ ಸೈಜ್ ಭಾವಚಿತ್ರ, ಪರವಾನಿಗೆ ತಮ್ಮ ವ್ಯಾಪಾರಿ ನೋಂದಣಿ ಪತ್ರ/ಸಂಸ್ಥೆ ನೋಂದಣಿ ಪತ್ರ, ಆಧಾರ್ ಕಾರ್ಡಿನ ಪ್ರತಿಯನ್ನು ಹಾಜರುಪಡಿಸಿ ಹರಾಜಿನಲ್ಲಿ ಭಾಗವಹಿಸುವುದು.
ಹರಾಜು ಮುಗಿದ ನಂತರ ಠೇವಣಿ ಮೊತ್ತವನ್ನು ಗರಿಷ್ಟ ಹಾಗೂ ಎರಡನೇ ಗರಿಷ್ಟ ಬಿಡ್ಡುದಾರರನ್ನು ಹೊರತುಪಡಿಸಿ ಉಳಿದ ಬಿಡ್ಡುದಾರರಿಗೆ ಸ್ಥಳದಲ್ಲಿಯೇ ಹಿಂದಿರುಗಿಸಲಾಗುವುದು. ಗರಿಷ್ಟ ಬಿಡ್ಡುದಾರರು ನಿಗಧತ ಅವಧಿಯೊಳಗೆ ಪೂರ್ಣ ಹಣವನ್ನು ಪಾವತಿಸಲು ವಿಫಲವಾದಲ್ಲಿ ಠೇವಣಿ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ನಂತರ ಎರಡನೇ ಬಿಡ್ಡುದಾರರಿಗೆ ಅವಕಾಶ ಮಾಡಿಕೊಡಲಾಗುವುದು ಇವರಿಗೆ ಸಹ ಇದೇ ನಿಯಮ ಅನ್ವಯವಾಗುತ್ತದೆ.
ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ ಪ್ರಕರಣಕ್ಕೆ ಒಳಗಾಗಿರುವ ವ್ಯಕ್ತಿ /ಸಂಸ್ಥೆಗಳು/ವ್ಯಾಪಾರಿಗಳು/ಸಾರ್ವಜನಿಕ ವಿತರಣಾ ಪದ್ದತಿ ವ್ಯವಸ್ಥೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಜಪ್ತಿ ಮಾಡಲಾದ ಆಹಾರ ಧಾನ್ಯಗಳನ್ನು ಎಲ್ಲಿದೆಯೋ ಅಲ್ಲಿ ಹಾಗೂ ಹೇಗಿವೆಯೋ ಹಾಗೆ ಷರತ್ತಿನಡಿ ಹರಾಜು ಮಾಡಲಾಗುತ್ತಿರುವುದರಿಂದ ಹರಾಜಿನಲ್ಲಿ ಭಾಗವಹಿಸುವವರು ಅದಕ್ಕೂ ಮುನ್ನ ತಾಲ್ಲೂಕಿನ ಸಗಟು ಗೋದಾಮುಗಳಿಗೆ ಪೂರ್ವಾಹ್ನ 10 ಘಂಟೆಗೆ ಭೇಟಿ ನೀಡಿ ಆಹಾರ ಧಾನ್ಯಗಳ ಗುಣಮಟ್ಟವನ್ನು ಪರಿಶೀಲನೆ ಮಾಡತಕ್ಕದ್ದು. ಬಹಿರಂಗ ಹರಾಜಿನಲ್ಲಿ ಬರುವ ಸ್ಪರ್ಧಾತ್ಮಕ ದರಗಳನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಥವಾ ಈ ಹರಾಜವನ್ನು ರದ್ದುಪಡಿಸುವ ಅಧಿಕಾರವನ್ನು ಕಾಯ್ದಿರಿಸಲಾಗಿದೆ.
ಆಯಾ ತಾಲ್ಲೂಕಿನ ತಹಶೀಲ್ದಾರರು, ಆಹಾರ ಸಿಬ್ಬಂದಿಯವರು ಮತ್ತು ಗೋದಾಮು ವ್ಯವಸ್ಥಾಪಕರು, ಕೆ.ಎಫ್.ಸಿ.ಎಸ್.ಸಿ ರವರ ಸಮಕ್ಷಮದಲ್ಲಿ ಬಹಿರಂಗ ಹರಾಜನ್ನು ಮಾಡಲಾಗುವುದು.
ಬಿಡ್‌ನಲ್ಲಿ ನಮೂದಾಗುವ ದರಗಳನ್ನು ಜಿಲ್ಲಾಧಿಕಾರಿಗಳು ಅನುಮೋದಿಸಿದ ನಂತರ ಬಿಡ್‌ನ ಒಟ್ಟು ಮೌಲ್ಯವನ್ನು ಸರ್ಕಾರದ ಲೆಕ್ಕ ಶಿರ್ಷಿಕೆಗೆ ನಿಗದಿತ ದಿನಾಂಕದೊಳಗಾಗಿ ಜಮಾ ಮಾಡಿ ಚಲನದ ಹರಾಜುಪಡಿಸಿದ ನಂತರ ಹರಾಜಾದ ಪದಾರ್ಥ ಎತ್ತುವಳಿಗೆ ಅವಕಾಶ ನೀಡಲಾಗುವುದು.
ಎಪಿಎಂಸಿ ಸೆಸ್ ಮತ್ತು ಇತರೆ ಯಾವುದಾದರೂ ಶುಲ್ಕವನ್ನು ಸರ್ಕಾರಕ್ಕೆ ಕಟ್ಟಬೇಕಾದಲ್ಲಿ ಹರಾಜಿನಲ್ಲಿ ಆಯ್ಕೆಯಾದ ಬಿಡ್‌ದಾರರ ಪಾವತಿಸತಕ್ಕದ್ದು.
ಬಹಿರಂಗ ಹರಾಜಾದ ಆಹಾರ ಧಾನ್ಯಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಆದೇಶ ನೀಡಿದ 3 ದಿನಗಳಲ್ಲಿ ತಾಲ್ಲೂಕಿನ ಸಗಟು ಗೋದಾಮುಗಳಿಂದ ಎತ್ತುವಳಿ ಮಾಡತಕ್ಕದ್ದು.
ಹೆಚ್ಚಿನ ಮಾಹಿತಿ ಅಥವಾ ಷರತ್ತುಗಳನ್ನು ಉಪ ನಿರ್ದೇಶಕರ ಕಚೇರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ರಾಯಚೂರು, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ರಾಯಚೂರು ಮತ್ತು ಜಿಲ್ಲೆಯ ಎಲ್ಲಾ ತಹಶೀಲ್ದಾರರ ಕಚೇರಿಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *