ಕವಿತಾಳ: ಮಾದಕ ವಸ್ತುಗಳ ಸೇವನೆಯು ಕೇವಲ ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲದೆ, ಇಡೀ ಕುಟುಂಬ ಮತ್ತು ಸುಂದರ ಭವಿಷ್ಯವನ್ನೇ ನಾಶಪಡಿಸುತ್ತದೆ. ಯುವಜನತೆ ಇಂತಹ ದುಶ್ಚಟಗಳಿಂದ ದೂರವಿದ್ದು, ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಡಿವೈಎಸ್‌ಪಿ ಚಂದ್ರಶೇಖರ ಜಿ ನಾಯಕ ಹೇಳಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ (KPS) ಬಾಲಕರ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ತಡೆಗಟ್ಟುವಿಕೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗೃತಿ ಅತ್ಯಗತ್ಯ:
ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ಹರಡುತ್ತಿರುವುದು ಆತಂಕಕಾರಿ ವಿಷಯ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರದಿಂದ ಇರಬೇಕು. ಯಾವುದೇ ಅಪರಿಚಿತರು ನೀಡುವ ವಸ್ತುಗಳನ್ನು ಸ್ವೀಕರಿಸಬಾರದು ಹಾಗೂ ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಪೋಷಕರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

