ರಾಯಚೂರು :ಮಂತ್ರಾಲಯದಲ್ಲಿರುವ ಪವಿತ್ರ ಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ ರಾಯರ ದಿವ್ಯ ಬೃಂದಾವನದ ಮುಂದೆ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ (KOF) ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ , ದೇವದುರ್ಗದ ಶಾಸಕರಾದ ಕರಿಯಮ್ಮ ಜಿ , ಮಾನವಿ ಮಾಜಿ ಶಾಸಕರಾದ ರಾಜ ವೆಂಕಟಪ್ಪ ನಾಯಕ್ ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ಅರ್ಚಕರು ಸಂಪ್ರದಾಯಬದ್ಧವಾಗಿ ಸ್ವಾಗತಿಸಿದರು. ಬಳಿಕ ರಾಯರ ಸನ್ನಿಧಿಯಲ್ಲಿ ವಿಶೇಷ ಅರ್ಚನೆ, ಪಾದುಕಾ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ರೈತರ ಬೆಳೆಗೆ ಸಮೃದ್ಧಿ ಬರಲಿ, ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಲಿ ಮತ್ತು ರಾಜ್ಯದ ಜನತೆ ಶಾಂತಿ-ಸೌಹಾರ್ದದಿಂದ ಬದುಕಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಪೂಜಾ ವಿಧಿವಿಧಾನಗಳ ನಂತರ ದೇವಸ್ಥಾನದ ಪರಿವಾರದಿಂದ ತೀರ್ಥ-ಪ್ರಸಾದ ಸ್ವೀಕರಿಸಿ, ದೇವಾಲಯದ ಇತಿಹಾಸ ಹಾಗೂ ಧಾರ್ಮಿಕ ಪರಂಪರೆ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಭಕ್ತರು ಹಾಗೂ ಕಾರ್ಯಕರ್ತರು ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಜೆಡಿಎಸ್ ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದು, ಭಕ್ತಿಭಾವಪೂರ್ಣ ವಾತಾವರಣ ನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *