ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರುದಲ್ಲಿರುವ ಅಬ್ಬೆತುಮಕೂರು ಶ್ರೀ ವಿಶ್ವರಾಧ್ಯ ಸುಕ್ಷೇತ್ರದಲ್ಲಿ ಅಣಿಮಾದಿ ಅಷ್ಟಸಿದ್ಧಿ ಪುರುಷ ಭಾವೈಕ್ಯತೆಯ ಭಗವಂತ ಸದ್ಗುರು ಶ್ರೀ ವಿಶ್ವರಾಧ್ಯರ ಜಾತ್ರಾ ಮಹೋತ್ಸವ ಹಾಗೂ ಭವ್ಯ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಈ ಮಹೋತ್ಸವದ ಅಂಗವಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್.ಎಸ್. ಬೋಸರಾಜು ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಸದ್ಗುರು ಶ್ರೀ ವಿಶ್ವರಾಧ್ಯರ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಜನತೆಗೆ ಸುಖ-ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು, ವೇದಮಂತ್ರಗಳ ಘೋಷಣೆ, ಭಜನೆ-ಕೀರ್ತನೆಗಳು ಹಾಗೂ ರಥೋತ್ಸವವು ಭಕ್ತರ ಗಮನ ಸೆಳೆಯಿತು. ಸಾವಿರಾರು ಭಕ್ತರು ಭಾಗವಹಿಸಿ ಸದ್ಗುರುಗಳ ಕೃಪೆಗೆ ಪಾತ್ರರಾದರು. ರಥೋತ್ಸವದ ವೇಳೆ ಭಕ್ತರು ಜಯಘೋಷಗಳೊಂದಿಗೆ ಭಾಗವಹಿಸಿದ್ದು, ಕ್ಷೇತ್ರದ ವಾತಾವರಣ ಭಕ್ತಿಭಾವದಿಂದ ಕೂಡಿತ್ತು.
ಪೂಜೆಯ ನಂತರ ಸದ್ಗುರು ಶ್ರೀಗಳು ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಜಾತ್ರಾ ಮಹೋತ್ಸವದ ಸ್ಮರಣಿಕೆ ನೀಡಿ ಆಶೀರ್ವಾದಿಸಿದರು. ಸಚಿವರು ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಸಹಕಾರ ಮುಂದುವರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನರಸನಗೌಡ, ಜಿ. ಶಿವಮೂರ್ತಿ, ಅಮರೇಗೌಡ ಹಂಚಿನಾಳ್, ಈಶ್ವರ ಮಡಿವಾಳ, ಸಣ್ಣ ನರಸ ರೆಡ್ಡಿ, ಗೋವಿಂದ ಸೇರಿದಂತೆ ಹಲವರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಉಪಸ್ಥಿತರಿದ್ದು, ಕಾರ್ಯಕ್ರಮ ಭಕ್ತಿಪೂರ್ಣ ಹಾಗೂ ಶಾಂತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *