ಬಳಗಾನೂರ : ಪಟ್ಟಣದ ಶ್ರೀ ಬಸವೇಶ್ವರ ಪ್ರೌಢಶಾಲೆ ಹಾಗೂ ಬಸವೇಶ್ವರ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಂಗವಾಗಿ ಈ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಳಗಾನೂರು ಪಟ್ಟಣದ ಶ್ರೀದೇವಿ ಕಿರಿಯ ಪ್ರಾಥಮಿಕ ಶಾಲೆಯ ಯುಕೆಜಿಯ 5 ವರ್ಷದ ವಿದ್ಯಾರ್ಥಿ ಪ್ರೀತಮ್ ತಂ/ ಸಗರಪ್ಪ ತಳವಾರ ಅವರು 2026ರ India Book of Records ಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ಪ್ರೀತಮ್ ವಿವಿಧ ವಿಷಯಗಳಲ್ಲಿ ಅದ್ಭುತ ಸ್ಮರಣಾಶಕ್ತಿ ಪ್ರದರ್ಶಿಸಿದ್ದಾನೆ. ಪ್ರಪಂಚದ 90 ದೇಶಗಳ ರಾಜಧಾನಿಗಳು, ಭಾರತದ 36 ರಾಜ್ಯಗಳ ರಾಜಧಾನಿಗಳು, 25 ರಾಷ್ಟ್ರೀಯ ಚಿಹ್ನೆಗಳು, ನೋಬೆಲ್ ಪ್ರಶಸ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾನ್ ಸಾಹಿತಿಗಳ ಹೆಸರುಗಳು, ವಿಶ್ವದ ಅದ್ಭುತಗಳು, ಸೌರಗ್ರಹಗಳು, ಖಂಡಗಳು, ಸಮುದ್ರ–ಸಾಗರಗಳು, ಕರ್ನಾಟಕದ ಕಂದಾಯ ವಿಭಾಗ, ವೇದಗಳು, ದಿಕ್ಕುಗಳು, ಕಾಲಗಳು, ಪಕ್ಷಗಳು, ತಿಂಗಳುಗಳು, ಕನ್ನಡ ವ್ಯಾಕರಣ, ಕಾಡುಪ್ರಾಣಿಗಳು, ಕ್ರೀಡೆಗಳ ಹೆಸರುಗಳು ಹಾಗೂ ವಿಶ್ವನಕ್ಷೆ ಗುರುತಿಸುವುದು ಸೇರಿದಂತೆ ಅನೇಕ ವಿಷಯಗಳನ್ನು ಲೀಲಾಜಾಲವಾಗಿ ಹೇಳುವ ಸಾಮರ್ಥ್ಯ ಹೊಂದಿದ್ದಾನೆ.
ಫೆಬ್ರವರಿ 10 ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಿಂದ ಆಯ್ಕೆ ಕುರಿತು ಮಾಹಿತಿ ಬಂದಿರುವುದಾಗಿ ತಾಯಿ ರೇಣುಕಾ ಸಗರಪ್ಪ ತಳವಾರ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರು ಹಾಗೂ ಗಣ್ಯರು, “ಇಂತಹ ಬಾಲ ಪ್ರತಿಭೆಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಗೌರವವನ್ನು ಹೆಚ್ಚಿಸುತ್ತವೆ. ಪೋಷಕರ ಪ್ರೋತ್ಸಾಹ ಮತ್ತು ಶಿಕ್ಷಕರ ಮಾರ್ಗದರ್ಶನ ಇದ್ದರೆ ಮಕ್ಕಳಲ್ಲಿ ಅಸಾಧ್ಯವೆನ್ನಿಸುವ ಸಾಧನೆಗಳೂ ಸಾಧ್ಯವಾಗುತ್ತವೆ” ಎಂದು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ, “ಪ್ರೀತಮ್ ಅವರ ಸ್ಮರಣಾಶಕ್ತಿ ಹಾಗೂ ವೇದಿಕೆ ಮೇಲೆ ನಿರ್ಭೀತಿಯಾಗಿ ವಿಷಯಗಳನ್ನು ಹೇಳುವ ಶೈಲಿ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಇಂತಹ ವಿದ್ಯಾರ್ಥಿಗಳು ನಮ್ಮ ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಪ್ರೀತಮ್ ಅವರಿಗೆ ಶಾಲು ಹೊದಿಸಿ, ಫಲಕ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅವರ ತಂದೆ ಸಗರಪ್ಪ ತಳವಾರ ಹಾಗೂ ತಾಯಿ ರೇಣುಕಾ ಅವರಿಗೆ ಸಹ ಸನ್ಮಾನಿಸಿ ಅಭಿನಂದಿಸಲಾಯಿತು. ಕುಟುಂಬಸ್ಥರು ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಬಾಲ ವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಪ್ರೀತಮ್ ತಳವಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತೆ ಎಲ್ಲರೂ ಹಾರೈಸಿದರು. ಈ ಬಾಲ ಪ್ರತಿಭೆಯ ಸಾಧನೆ ಬಳಗಾನೂರು ಹಾಗೂ ಸಮೀಪ ಪ್ರದೇಶದ ಜನರಿಗೆ ಹೆಮ್ಮೆಯ ವಿಷಯವಾಗಿದೆ.

