ಮಸ್ಕಿ: ತಾಲೂಕಿನ ಬೆಳ್ಳಿಗನೂರು ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ತಿಂಗಳುಗಳೇ ಕಳೆದರೂ ಗ್ರಾ.ಪಂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿಲ್ಲ. ಹೊಡೆದ ಪೈಪ್ ಮೂಲಕ ಕಲುಷಿತ ನೀರು ಮಿಶ್ರಣವಾಗಿ ಅದೇ ನೀರು ಗ್ರಾಮಸ್ಥರಿಗೆ ಪೂರೈಸಿದ್ದರಿಂದ ವಾಂತಿ-ಭೇದಿ ಶುರುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥ ಡಿಎಸ್‌ಎಸ್ ಮುಖಂಡ ವಂದಾಲಪ್ಪ ತಿಳಿಸಿದರು.
ಈ ಬಗ್ಗೆ ಗ್ರಾಮ ಪಂಚಾಯತ್ ಪಿಡಿಓ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜಜವಾಗಿಲ್ಲ. ಅಶುದ್ಧ ನೀರು ಸೇವನೆಯ ಪರಿಣಾಮವಾಗಿ ಗ್ರಾಮದಲ್ಲಿ ವಾಂತಿ, ಭೇದಿ, ಜ್ವರ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಮಕ್ಕಳು ಮತ್ತು ವೃದ್ಧರು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದು, ಹಲವಾರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ೪೦೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಗಂಭೀರ ಸಮಸ್ಯೆಯಾಗಿದೆ.
ಈ ಬಗ್ಗೆ ಗ್ರಾಮದ ನಿವಾಸಿಗಳು ನೀರು ಸರಬರಾಜು ಮಾಡುವ ಪೈಪ್ ಹೊಡೆದು ಒಡೆದು ತಿಂಗಳುಗಳು ಕಳೆದರೂ ಅಧಿಕಾರಿಗಳು ದುರಸ್ತಿ ಕಾರ್ಯಕೈಗೊಳ್ಳದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

