ಮಾನ್ವಿ : ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರೇಗುಡ್ಡ ಗ್ರಾಮದಲ್ಲಿರುವ ಗ್ರಂಥಾಲಯ, ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಬಂಡೆಗುರು ಕರೇಗುಡ್ಡ ಅಧ್ಯಕ್ಷರು ಸಂಸದರಾದ ಜಿ.ಕುಮಾರ್ ನಾಯಕ್, ಸಚಿವ ಎನ್.ಎಸ್.ಬೋಸರಾಜು ಹಾಗೂ ಮಾನ್ವಿ ಶಾಸಕ ಹಂಪಯ್ಯ ಸಾಹುಕಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕರೇಗುಡ್ಡ ಗ್ರಾಮದಲ್ಲಿರುವ ಹಳೆಯ ಅಂಗನವಾಡಿ ಕೇಂದ್ರವು ಸಂಪೂರ್ಣ ಹಾಳಾಗಿದ್ದು, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಮತ್ತು ಓದುಗರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಸರ್ಕಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ, ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಮಟ್ಟದಲ್ಲಿ ಅವು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮದಲ್ಲಿರುವ ಗ್ರಂಥಾಲಯದಲ್ಲಿ ಕುಡಿಯುವ ಸ್ವಚ್ಛ ನೀರಿನ ವ್ಯವಸ್ಥೆ ಇಲ್ಲದಿರುವುದು, ಪ್ರತಿ ತಿಂಗಳು ಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಸಪತ್ರಿಕೆಗಳು ಒದಗಿಸದಿರುವುದು, ಓದುಗರಿಗೆ ಸೂಕ್ತ ಸೌಲಭ್ಯಗಳ ಕೊರತೆ ಇರುವುದು ಗಂಭೀರ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದರು. ಆದ್ದರಿಂದ ಕರೇಗುಡ್ಡ ಗ್ರಾಮಕ್ಕೆ ಸಮರ್ಪಕ ಗ್ರಂಥಾಲಯ ಕಟ್ಟಡ, ಮೂಲಭೂತ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಂಬಯ್ಯಗೌಡ, ಚನ್ನಬಸವ ನಾಯಕ್, ರಂಗನಾಥ ನಾಯಕ್, ಬುಡ್ಡಪ್ಪ, ಭಾಷಾ, ಹುಚ್ಚಪ್ಪ ಮುಂತಾದವರು ಇದ್ದರು.

