ರಾಯಚೂರು ಫೆಬ್ರವರಿ 20 (ಕರ್ನಾಟಕ ವಾರ್ತೆ): ಆರ್‌ಬಿಎಸ್‌ಕೆ ವೈದ್ಯಕೀಯ ತಂಡವು ಕ್ಷೇತ್ರ ಮಟ್ಟದಲ್ಲಿ ಗುರುತಿಸಿದ ನ್ಯೂನ್ಯತೆಯುಳ್ಳ ಮಕ್ಕಳಿಗೆ ತಜ್ಞ ವೈದ್ಯರಿಂದ ಫೆ.20ರಂದು ತಪಾಸಣೆ ಶಿಬಿರ ನಡೆಯಿತು.

ರಾಯಚೂರು ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಈ ಶಿಬಿರದಲ್ಲಿ ಹುಟ್ಟಿನಿಂದ 18 ವರ್ಷದೊಳಗಿನ ಜನ್ಮಜಾತ ಹೃದಯ ಖಾಯಿಲೆಯ 14 ಮಕ್ಕಳು, ಶೀಳು ತುಟಿ, ಶೀಳು ಅಂಗಳದ 3 ಮಕ್ಕಳಿಗೆ ತಪಾಸಣೆ ಮಾಡಲಾಯಿತು. ಮಕ್ಕಳ ತಜ್ಞರಾದ ಡಾ.ಇಮ್ರಾನ್ ತಪಾಸಣೆ ನಡೆಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 12 ಆರ್‌ಬಿಎಸ್‌ಕೆ ವೈದ್ಯಕೀಯ ತಂಡಗಳ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ತಂಡದಲ್ಲಿ ವೈದ್ಯರು, ಶೂಶ್ರೂಷಕರು, ನೇತ್ರಾಧಿಕಾರಿಗಳು ಇದ್ದು, ಅಂಗನವಾಡಿ, ಶಾಲೆಗಳಲ್ಲಿ ತಪಾಸಣೆ ಕೈಗೊಂಡು ರಾಯಚೂರನ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಜ್ವಲ್ ಕುಮಾರ್ ನೇತೃತ್ವದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಮಕ್ಕಳ ತಜ್ಞರಿಂದ ತಪಾಸಣೆ ಮಾಡಿಸಲಾಗುತ್ತದೆ. ಇದಕ್ಕೆ ನವೋದಯ ಹಾಗೂ ರಿಮ್ಸ್ ಆಸ್ಪತ್ರೆಯ ತಜ್ಞರು ಕೈಜೋಡಿಸಿದ್ದಾರೆ.

ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ: ಮಕ್ಕಳ ಬೆಳವಣಿಗೆಗೆ ಕಾರಣವಾಗುವ ನಾಲ್ಕು ಕಾರಣಗಳನ್ನು ಗುರುತಿಸಿ ಮಕ್ಕಳ ತಜ್ಞರು, ಇಎನ್‌ಟಿ ತಜ್ಞರು, ಮಾನಸಿಕ ತಜ್ಞರು, ಪೀಜಿಯೋಥೆರಪಿಸ್ಟ್ ಅವರು ಅಗತ್ಯ ಚಿಕಿತ್ಸೆ, ಸಲಹೆಗಳನ್ನು ನೀಡುತ್ತಾರೆ. ಪ್ರಸ್ತುತ ಪ್ರತಿದಿನ 15-20 ಮಕ್ಕಳು ಕೇಂದ್ರದ ಸದುಪಯೋಗ ಪಡೆಯುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸಹ ಚಿಕಿತ್ಸೆ: ಜನ್ಮಾಜಾತ ಹೃದಯ ಸಂಬಂಧಿ ಖಾಯಿಲೆಗಳ ತುರ್ತು ಶಸ್ತ್ರಚಿಕಿತ್ಸೆಗಳಿಗಾಗಿ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಪಾಲಕರು ತಮ್ಮ ಮಗುವಿಗೆ ಆರೋಗ್ಯ ಸಮಸ್ಯೆಗಳಿಗೆ ಹಲವು ಬಾರಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಆರ್ಥಿಕ ತೊಂದರೆಗೊಳಗಾಗುವುದನ್ನು ತಪ್ಪಿಸಲು ಸರಕಾರ ಅನುಷ್ಠಾನ ಮಾಡಿರುವ ಯೋಜನೆ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವಾಗಿದೆ. ಮಕ್ಕಳ ಜನನದ ನಂತರದ ಆರಂಭದಲ್ಲಿ ಕಂಡು ಬರುವ ಬೆಳವಣಿಗೆಗೆ ಕುಂಠಿತವಾಗುವ ಗಂಭೀರ ಆರೋಗ್ಯ ಸಮಸ್ಯೆಗಳಾದ ಜನ್ಮಾಜಾತ ಹೃದಯ ಸಂಬಂಧಿ ಖಾಯಿಲೆಗಳು (ಸಿಹೆಚ್‌ಡಿ), ಸೀಳು ತುಟಿ, ವಕ್ರಪಾದ, ಮಾನಸಿಕ ಆರೋಗ್ಯ ಸಮಸ್ಯೆಗಳು, ಸೀಳು ಅಂಗಳ, ಕೀವಿ ಕೇಳದಿರುವುದು, ದೈಹಿಕ ನ್ಯೂನ್ಯತೆಗಳಿರುವವರಿಗೆ ಪೀಜಿಯೋಥೆರಪಿ ಸೇರಿದಂತೆ ಮಗುವಿನ ಬೆಳವಣಿಗೆಗೆ ಅಡ್ಡಿಪಡಿಸುವ ಆರೋಗ್ಯ ಸಮಸ್ಯೆಗಳಿಗೆ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮದಡಿ ಮಕ್ಕಳಿಗೆ ಉಚಿತ ಪರೀಕ್ಷೆ, ಅಗತ್ಯವಿರುವ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಸಹ ಕೈಗೊಳ್ಳಲಾಗುತ್ತಿದ್ದು ಪಾಲಕರು ನೆಮ್ಮದಿಯಿಂದ ತಮ್ಮ ಮುದ್ದು ಮಗುವಿನ ಸಂತಸದ ಕ್ಷಣಗಳನ್ನು ಆಸ್ವಾದಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.

ಸಿಹೆಚ್‌ಡಿ ಪತ್ತೆಗಾಗಿ ರಾಯಚೂರು ಜಿಲ್ಲೆಯಲ್ಲಿ ಓಪೆಕ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯೊಂದಿಗೆ ಇಕೊ ಟೆಸ್ಟ್ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಿಂದ ಸಮಯ ಉಳಿತಾಯವಾಗಲಿದೆ. ಎಲ್ಲ ತಾಲೂಕುಗಳಲ್ಲಿ ಗುರುತಿಸಲ್ಪಟ್ಟ ಸಮಸ್ಯೆ ಇರುವ ಮಕ್ಕಳನ್ನು ಇಲ್ಲಿ ತಪಾಸಣೆ ಮಾಡಲಾಗುವುದು ಎಂದರು.

ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದೀತಾ ಎಮ್ ಎನ್ ಮಾತನಾಡಿ, ಜಿಲ್ಲೆಯಲ್ಲಿ ನವಜಾತ ಶಿಶುಗಳ ಕುಂಠಿತ ಬೆಳವಣಿಗೆಗೆ ಕಾರಣವಾಗುವ ಗಂಭೀರ ಸಮಸ್ಯೆಗಳಿಗೆ ಪಾಲಕರಿಗೆ ಆರ್ಥಿಕ ಹೊರೆಯನ್ನು ತಪ್ಪಿಸಿ ಅಗತ್ಯ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ, ಅನುಸರಣೆ ಕೈಗೊಂಡು ನೆಮ್ಮದಿಯ ಭವಿಷ್ಯಕ್ಕೆ ನಿಮ್ಮ ಆರೋಗ್ಯ – ನಮ್ಮ ಆಧ್ಯತೆ ಎಂಬ ಧ್ಯೇಯದಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಇಂದಿನ ತಪಾಸಣೆ ವೇಳೆ ಡಾ.ಸಂಧ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಹಿರಿಯ ಶುಶ್ರೂಷಣಾಧಿಕಾರಿ ಸಲೋಮಿ, ಡಿವೈಹೆಚ್‌ಇಓ ಬಸಯ್ಯ, ಡಿಪಿಎಮ್ ನವೀನ್‌ಕುಮಾರ, ಆರ್‌ಬಿಎಸ್‌ಕೆ ಕಲ್ಸ್ಲ್ಟಂಟ್ ಸಿದ್ದಮ್ಮ, ಬಿಹೆಚ್‌ಇಓ ಸರೋಜಾ ಕೆ, ಡಿಇಐಸಿ ತಂಡದ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *