ಮಾನ್ವಿ : ತಾಲ್ಲೂಕು ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸುರಕ್ಷಿತವಲ್ಲದ ಪದಾರ್ಥಗಳನ್ನು ನೀರಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಿತ ಘಟಕಗಳ ಮೇಲೆ ತಕ್ಷಣವೇ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಾನ್ವಿ ತಾಲ್ಲೂಕು ಘಟಕದ ಜಿಲ್ಲಾ ಕಾರ್ಯಧ್ಯಕ್ಷ ಆನಂದಸ್ವಾಮಿ ಹಿರೇಮಠ ಅವರು ತಹಶೀಲ್ದಾರ್‌ರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ಈ ಕುರಿತು ಅವರು ಮಾತನಾಡಿ, ಕೆಲವು ಘಟಕಗಳಿಂದ ವಿತರಿಸಲಾಗುತ್ತಿರುವ ನೀರನ್ನು ಬಳಸುತ್ತಿರುವ ಸಾರ್ವಜನಿಕರಲ್ಲಿ ಹೊಟ್ಟೆ ಸಮಸ್ಯೆಗಳು, ವಾಂತಿ, ದೌರ್ಬಲ್ಯ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿವೆ ಎಂದು ಹೇಳಿದರು. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಆದ್ದರಿಂದ ತಾಲ್ಲೂಕು ಆಡಳಿತ, ಪುರಸಭೆ, ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ಎಲ್ಲಾ ನೀರಿನ ಘಟಕಗಳಿಗೆ ಭೇಟಿ ನೀಡಿ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕು. ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಯಾವುದೇ ಅಸುರಕ್ಷಿತ ಅಂಶಗಳು ಪತ್ತೆಯಾದಲ್ಲಿ ಸಂಬಂಧಿತ ಘಟಕಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶೇಖರ ಗೌಡ ಮಾಲಿ ಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಶಿವಕುಮಾರ್, ತಾಲೂಕಾಧ್ಯಕ್ಷ ಭೀಮಣ್ಣ ಮುದಗಲ್, ತಾಲೂಕ ಉಪಾಧ್ಯಕ್ಷ ಅಫ್ರದ್, ನಗರ ಘಟಕ ಅಧ್ಯಕ್ಷ ನಾಗರಾಜ್ ಮೆಟ್ಟಿ, ನಗರ ಘಟಕ ಗೌರವಾಧ್ಯಕ್ಷ ಮನೋಹರ್ ಆಚಾರಿ, ಮಲ್ಲಿಕಾರ್ಜುನ ಸ್ವಾಮಿ, ದೊಡ್ಡಣ್ಣ ಹೂಗಾರ್, ಸುನಿಲ್ ಕುಮಾರ್ ಬೆಟ್ಟದೂರು, ಆಟೋ ಘಟಕ ಅಧ್ಯಕ್ಷ ಹನುಮೇಶ ನಾಯಕ, ನಿಸರ್ ಅಹ್ಮದ್, ಸೈ. ಶಕ್ಷಾವಲಿ, ಬಂದೇನವಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


