ರಾಯಚೂರು ಫೆಬ್ರವರಿ 20 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಫೆ.20ರಂದು ಸಂತ ಕವಿ ಸರ್ವಜ್ಞ ಜಯಂತಿ ಆಚರಿಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಸಂತಕವಿ ಸರ್ವಜ್ಞ ಅವರ ಭಾವಚಿತ್ರದ ಮೆರವಣಿಗೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಿಲ್ಲಾ ರಂಗಮಂದಿರಕ್ಕೆ ಬಂದು ಸೇರಿತು.

ಡೊಳ್ಳಿನ ಕಲಾ ತಂಡಗಳ ಮೂಲಕ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಮುಖಂಡರಾದ ಕೆ.ಶಾಂತಪ್ಪ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ತಹಸೀಲ್ದಾರ ಸುರೇಶ ವರ್ಮಾ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.

ಬಳಿಕ ಜಿಲ್ಲಾ ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಯರಮರಸ್‌ನ ನಿವೃತ್ತ ಪ್ರಾಂಶುಪಾಲರಾದ ವೈ ಸುರೇಂದ್ರಬಾಬು ಕುಂಬಾರ ಅವರು ವಿಶೇಷ ಉಪನ್ಯಾಸ ನೀಡಿ, 16ನೇ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಸರ್ವಜ್ಞ ಅವರು ತ್ರಿಪದಿ ರಚನೆಗಳ ಮೂಲಕ ಅರ್ಥಪೂರ್ಣ ವಚನಗಳನ್ನು ಜನತೆಗೆ ನೀಡಿದ್ದಾರೆ. ಹರಿತವಾದ ತ್ರಿಪದಿಯ ಸಾಲುಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸರ್ವಜ್ಞ ಅವರು ಕನ್ನಡ ನಾಡಿನ ಸಂಪತ್ತು ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಕೃಷ್ಣ ಕಟ್ಟಿಮನಿ ಅವರು ಮಾತನಾಡಿ, ಸರ್ವಜ್ಞ ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರು ಇಡೀ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ ಕವಿಯಾಗಿದ್ದಾರೆ. ಸಮ ಸಮಾಜ ನಿರ್ಮಾಣ ಕುರಿತು ಜನತೆಗೆ ತಮ್ಮ ವಚನಗಳ ಮೂಲಕ ಉತ್ತಮ ಸಂದೇಶ ನೀಡಿದರು. ಸಮಾಜ ಇನ್ನಷ್ಟು ಅಭಿವೃದ್ಧಿಯಾಗಲು ಸಮಾಜದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ಮಾಡಿದರು.

ಸಮಾರಂಭದಲ್ಲಿ ಗ್ರೇಡ್ 2 ತಹಸೀಲ್ದಾರ ಪರಶುರಾಮ, ಸಮಾಜದ ಪ್ರಮುಖರಾದ ಶಿವರಾಜಪ್ಪ, ವೀರಭದ್ರಪ್ಪ, ಬಸವರಾಜ, ಶಿವಪ್ರಕಾಶ, ಭೀಮಪ್ಪ, ಲಕ್ಷ್ಮೀರೆಡ್ಡಿ, ತಿಮ್ಮಪ್ಪ, ಬಸವರಾಜ, ರಮೇಶ, ನರಸಿಂಗಪ್ಪ, ಸಾಯಿಬಾಬಾ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *