ಜಿ ಕುಮಾರ ನಾಯಕ ಅವರು ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ನಡೆಯುತ್ತಿರುವ ಜಲಧಾರೆ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನಾ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೇಂದ್ರ ಸರ್ಕಾರದ Jal Jeevan Mission ಯೋಜನೆಯಡಿ, NABARD ಹಾಗೂ Urban Development Department (UDD) ಅನುದಾನದೊಂದಿಗೆ ಸುಮಾರು 2200 ಕೋಟಿ ರೂ. ವೆಚ್ಚದಲ್ಲಿ ಈ ಮಹತ್ವದ ಯೋಜನೆ ಕೈಗೊಳ್ಳಲಾಗಿದೆ. ರಾಯಚೂರು ಜಿಲ್ಲೆಯ 860 ಗ್ರಾಮಗಳು ಹಾಗೂ ಸುಮಾರು 20 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಮಾನ್ವಿ, ಮಸ್ಕಿ, ಕವಿತಾಳ, ತುರುವಿಹಾಳ, ಬಳಗಾನೂರು, ಸಿರವಾರ ಹಾಗೂ ಹಟ್ಟಿ ಪಟ್ಟಣ ಸೇರಿದಂತೆ ಅನೇಕ ಭಾಗಗಳಿಗೆ DBOT ಆಧಾರದ ಮೇಲೆ ನೀರು ಸರಬರಾಜು ವ್ಯವಸ್ಥೆ ನಿರ್ಮಿಸಲಾಗುತ್ತಿದೆ. 2024ರೊಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿಯು ಇನ್ನೂ ಪೂರ್ಣವಾಗದಿರುವುದರಿಂದ ಸಂಸದರು ಅಧಿಕಾರಿಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಜನರ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಕೆಲಸವನ್ನು ವಿಳಂಬ ಮಾಡದೇ, ಗುಣಮಟ್ಟ ಕಾಪಾಡಿಕೊಂಡು ತ್ವರಿತವಾಗಿ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಹಿಸುವುದಿಲ್ಲ,” ಎಂದು ಅವರು ಎಚ್ಚರಿಸಿದರು.
ಯೋಜನೆ ಪೂರ್ಣಗೊಂಡ ನಂತರ ಪ್ರತಿದಿನ ಸುಮಾರು 1.60 ಕೋಟಿ ಲೀಟರ್ ನೀರನ್ನು ಸರಬರಾಜು ಮಾಡುವ ಸಾಮರ್ಥ್ಯ ಹೊಂದಿದ್ದು, ಜಿಲ್ಲೆಯ ಬಹುಭಾಗಗಳಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಸಂಸದರು ತಿಳಿಸಿದರು.
ಈ ವೇಳೆ ಜಲಧಾರೆ ಯೋಜನೆಯ ವ್ಯವಸ್ಥಾಪಕರು, ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದು ಕಾಮಗಾರಿಯ ಪ್ರಗತಿ ಕುರಿತು ಚರ್ಚೆ ನಡೆಸಿದರು.
ಸಂಸದರು ಕಾಮಗಾರಿಯ ಪ್ರತಿಯೊಂದು ಹಂತವೂ ಪಾರದರ್ಶಕವಾಗಿ ನಡೆಯಬೇಕು ಹಾಗೂ ಜನರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯಗತಗೊಳಿಸಬೇಕು ಎಂದು ಸೂಚಿಸಿದರು.


