ರಾಯಚೂರು ಫೆ.19 (ಕ.ವಾ.): ರಾಯಚೂರು ಪ್ರವಾಸದಲ್ಲಿದ್ದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ. ರಘು ಅವರು ಫೆಬ್ರವರಿ 19ರಂದು ನಗರದ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು.

ಭೇಟಿ ವೇಳೆ ಅಧ್ಯಕ್ಷರು, ಅಲ್ಲಿನ ಸ್ವಚ್ಛತಾ ಕಾರ್ಯ ಹಾಗೂ ಕರ್ಮಚಾರಿಗಳ ಕೆಲಸದ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿದರು.

ರಿಮ್ಸ್ ಅಧಿಕಾರಿಗಳೊಂದಿಗೆ ಸಭೆ: ಭೇಟಿ ಸಂದರ್ಭದಲ್ಲಿ ಅಧ್ಯಕ್ಷರು, ರಿಮ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು. ಸ್ಬಚ್ಛತಾ ಸಿಬ್ಬಂದಿಯೊಂದಿಗೆ ಮಲ ಎತ್ತಿಸುವುದು ಅಮಾನವೀಯ ಕಾರ್ಯವಾಗುತ್ತದೆ. ಈ ಅನಿಷ್ಠ ಪದ್ದತಿ ತೊಲಗಬೇಕು.

ಈ ಕಾರ್ಯಕ್ಕೆ ಹಲವು ಯಂತ್ರೋಪಕರಣಗಳಿವೆ. ಅದನ್ನು ಬಿಟ್ಟು ಸಿಬ್ಬಂದಿಯಿಂದ ಮಲ ಎತ್ತಿಸುವ ಕೆಲಸ ಮಾಡಿಸುವುದು ಸರಿಯಲ್ಲ. ಇತ್ತೀಚೆಗೆ ರಿಮ್ಸನಲ್ಲಿ ಸ್ವಚ್ಛತೆ ಕೆಲಸ ಮಾಡುವ ಸಿಬ್ಬಂದಿಯಿಂದ ಮಲ ಎತ್ತಿಸಿದ ಕುರಿತು ದಾಖಲೆ ಸಮೇತ ದೂರು ಬಂದಿದ್ದು, ಈ ಕೆಲಸ ಮಾಡಿಸಿದ ಸಂಬಂಧಪಟ್ಟ ಸೂಪರ್‌ವೈಸರಗಳಿಗೆ ಕೂಡಲೇ ನೊಟೀಸ್ ಜಾರಿ ಮಾಡಿ ಶಿಸ್ತುಕ್ರಮ ಜರುಗಿಸಿ ಎಂದು ರಿಮ್ಸ್ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಇಲ್ಲವಾದರೆ ರಿಮ್ಸ್ ನಿರ್ದೇಶಕರು ಸೇರಿ ಎಲ್ಲರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಶ್ನಿಸಲು ಹೋದ 7 ಜನ ಸ್ವಚ್ಛತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ ಕುರಿತು ಮಾಹಿತಿ ಬಂದಿದೆ.

ಯಾವುದೇ ಕಾರಣಕ್ಕೂ ಕರ್ಮಚಾರಿಗಳ ಹೊಟ್ಟೆ ಮೇಲೆ ಹೊಡೆಯಬಾರದು. ಅಮಾನತುಗೊಳಿಸಿದ ಅಥವಾ ವರ್ಗಾವಣೆ ಮಾಡಿದ ಎಲ್ಲ ಸಫಾಯಿ ಕರ್ಮಚಾರಿಗಳನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಸ್ವಚ್ಛತಾ ಸಿಬ್ಬಂದಿಗೆ ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಲು ರಿಮ್ಸನ ಕೆಲ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ ದೂರುಗಳಿವೆ. ಇದು ಮುಂದುವರೆಯಬಾರದು ಎಂದು ಎಚ್ಚರಿಕೆ ನೀಡಿದರು. ಮತ್ತು ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಅಹವಾಲು ಆಲಿಕೆ:

ಅಧ್ಯಕ್ಷರು, ಇದೆ ವೇಳೆ ಕಾರ್ಮಿಕರ ಅಹವಾಲು ಆಲಿಸಿದರು. ಸಫಾಯಿ ಕರ್ಮಚಾರಿಗಳ ಹಕ್ಕುಗಳನ್ನು ರಕ್ಷಿಸುವುದು ಆಯೋಗದ ಮೊದಲ ಆದ್ಯತೆಯಾಗಿದೆ. ಅರ್ಹ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೆ ನಾವು ವಿಶ್ರಮಿಸುವುದಿಲ್ಲ. ಸಫಾಯಿ ಕರ್ಮಚಾರಿಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಯೋಗದ ಕಾರ್ಯದರ್ಶಿ ಮಾಧುಸ್ವಾಮಿ, ರಿಮ್ಸ್ ನಿರ್ದೇಶಕ ಡಾ.ರಮೇಶ, ಡಾ.ಎಂ.ಬಸವರಾಜ, ಪ್ರಮುಖರಾದ ಕಡಗೋಲ ಚೇತನ, ಪ್ರಸಾದ ಭಂಡಾರಿ, ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *