ಮಸ್ಕಿ : ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಂದು ಅಭಿನಂದನ್ ಸ್ಪೂರ್ತಿ ಧಾಮದಲ್ಲಿ ಮಾನವೀಯತೆಗೆ ಮಾದರಿಯಾದ ಸೇವೆ ನಡೆಯಿತು. ರಂಜಾನ್ ತಿಂಗಳು ಮುಸ್ಲಿಮರಿಗೆ ದಾನ, ಧರ್ಮ, ಸಹಾಯ ಹಾಗೂ ಮಾನವೀಯತೆಯ ಸಂದೇಶ ನೀಡುವ ಪವಿತ್ರ ಕಾಲವಾಗಿದ್ದು, ಈ ಸಂದರ್ಭದಲ್ಲಿ ಅಗತ್ಯವಿರುವವರಿಗೆ ನೆರವಾಗುವುದು ಧಾರ್ಮಿಕ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ.

ಈ ಪವಿತ್ರ ತಿಂಗಳ ಆತ್ಮಸ್ಫೂರ್ತಿಯಿಂದ ಪ್ರೇರಿತರಾಗಿ ಸಹೋದರಿ ಯಾಸ್ಮಿನ್ ಅವರು ಒಂದು ಹೋಟೆಲ್‌ನಲ್ಲಿ ದುಡಿದು ಪಡೆದ 15 ದಿನಗಳ ಸಂಬಳವನ್ನು ಸಂಪೂರ್ಣವಾಗಿ ಮಕ್ಕಳ ಕಲ್ಯಾಣಕ್ಕಾಗಿ ಮೀಸಲಿಟ್ಟು, ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳಿಗೆ ಅಗತ್ಯ ವಸ್ತುಗಳು ಹಾಗೂ ಸಿಹಿ ತಿನಿಸುಗಳನ್ನು ವಿತರಿಸಿದರು.

ಸ್ವಂತ ಶ್ರಮದ ಆದಾಯವನ್ನು ಸಮಾಜದ ಹಿತಕ್ಕಾಗಿ ಅರ್ಪಿಸುವ ಮೂಲಕ ಸಹೋದರಿ ಯಾಸ್ಮಿನ್ ಅವರು ರಂಜಾನ್‌ನ ನಿಜವಾದ ಅರ್ಥವಾದ ದಾನ ಮತ್ತು ಸಹಭಾವನೆಯನ್ನು ಸಮಾಜಕ್ಕೆ ಸಾರಿದರು.ಅವರ ಈ ಸೇವಾಭಾವನೆ ಎಲ್ಲರ ಮನಸ್ಸುಗಳನ್ನು ಸ್ಪರ್ಶಿಸಿ, ಹಬ್ಬದ ಸಂತಸಕ್ಕೆ ಇನ್ನಷ್ಟು ಅರ್ಥವನ್ನು ನೀಡಿತು. ಸಹೋದರಿ ಯಾಸ್ಮಿನ್ ಅವರ ಈ ಶ್ರೇಷ್ಠ ವ್ಯಕ್ತಿತ್ವ ಹಾಗೂ ನಿಸ್ವಾರ್ಥ ಸೇವೆಗೆ ಅನಂತ ಕೋಟಿ ನಮನಗಳು. ಇಂತಹ ಸೇವಾಕಾರ್ಯಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಉಪಸ್ಥಿತರಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *