ಮಸ್ಕಿ : ತಾಲೂಕಿನ ಗುಂಡ ಗ್ರಾಮದ ವ್ಯಾಪ್ತಿಯ ಹೊಕ್ರಾಣಿ ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಮುನ್ನೆಚ್ಚರಿಕಾ ಕ್ರಮವಾಗಿ ಸಂಬಂಧಪಟ್ಟ ಗುಡುದೂರು ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಡಂಗೂರ ಅಥವಾ ಮೈಕ್ ಮೂಲಕ ಜಾಗೃತಿ ಮೂಡಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
ಗ್ರಾಮಸ್ಥರು ಅನಗತ್ಯವಾಗಿ ಅರಣ್ಯ ಪ್ರದೇಶದ ಕಡೆಗೆ ತೆರಳಬಾರದು, ಜಾನುವಾರುಗಳನ್ನು ಕಾಡು ಪ್ರದೇಶದ ಸಮೀಪ ಮೇಯಿಸಲು ಬಿಡಬಾರದು ಹಾಗೂ ರಾತ್ರಿ ಸಮಯದಲ್ಲಿ ಒಬ್ಬರೇ ಸಂಚರಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಶಾಲಾ ಮಕ್ಕಳಿಗೆ ವಿಶೇಷ ಜಾಗೃತಿ ಮೂಡಿಸಿ, ಪೋಷಕರು ಮಕ್ಕಳ ಚಲನವಲನದ ಮೇಲೆ ಗಮನ ಹರಿಸುವಂತೆ ತಿಳಿಸಲಾಗಿದೆ.
ಚಿರತೆ ಕಾಣಿಸಿಕೊಂಡ ಪ್ರದೇಶದ ಸುತ್ತಮುತ್ತ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ನಿಗಾವಹಿಸಿದ್ದು, ಪ್ರಾಣಿಯನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶದ ಒಳಭಾಗಕ್ಕೆ ಬಿಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಪ್ರತ್ಯಕ್ಷಗೊಂಡ ಸ್ಥಳದಲ್ಲಿ ಜನಸಮೂಹ ನಿಯಂತ್ರಣ ಮಾಡಿ, ಶಾಂತಿ ಮತ್ತು ಭದ್ರತೆ ಕಾಪಾಡಲು ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಯಾವುದೇ ವದಂತಿಗಳಿಗೆ ಒಳಗಾಗದೇ, ಅನುಮಾನಾಸ್ಪದ ಚಲನವಲನ ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯದಲ್ಲಿ ಲೋಪ ಕಂಡುಬಂದಲ್ಲಿ, ಅವರ ವಿರುದ್ಧ Disaster Management Act, 2005 ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ವಿಪತ್ತು ನಿರ್ವಹಣಾ ಸಮಿತಿ ಎಚ್ಚರಿಸಿದೆ.

