ರಾಯಚೂರು ನವೆಂಬರ್ 25 (ಕ.ವಾ.): ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಎಲ್ಲ ರೈತರಿಗೂ ಅನುಕೂಲವಾಗುವ ಹಾಗೆ 2025-26ನೇ ಸಾಲಿನ ಎಂಎಸ್‌ಪಿ ಹತ್ತಿ ಖರೀದಿ ನೋಂದಣಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಲಾಗಿದ್ದು, ರೈತರು ತರಾತುರಿ ಮಾಡದೇ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ರಾಯಚೂರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.
ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನವೆಂಬರ್ 24ರ ಸಂಜೆ ವೇಳೆ, ರೈತ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಈಗಾಗಲೇ ದೇವದುರ್ಗ ತಾಲೂಕಿನಲ್ಲಿ 5 ಕೇಂದ್ರಗಳು, ಮಾನವಿ, ಸಿಂಧನೂರ, ಸಿರವಾರ ತಾಲೂಕುಗಳಲ್ಲಿ ತಲಾ ಒಂದು ಹತ್ತಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ.
ಭಾರತೀಯ ಹತ್ತಿ ನಿಗಮದಿಂದ ಖರೀದಿ ಕೇಂದ್ರಗಳು ಈಗಾಗಲೇ ಜಿಲ್ಲೆಯಲ್ಲಿ ಆರಂಭವಾಗಿದ್ದು, ಹತ್ತಿ ಮಾರಾಟ ಮಾಡಲು ಇಚ್ಚಿಸುವ ಪ್ರತಿಯೊಬ್ಬ ರೈತರು ತಮ್ಮ ತಮ್ಮ ಮೊಬೈಲನಿಂದಲೇ ನೋಂದಣಿ ಮಾಡಿಕೊಳ್ಳಬೇಕು. ರೈತರು, ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಮೊದಲು ಡಿಜಿಟಲ್ ನೋಂದಣಿ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರನಲ್ಲಿ ಲಭ್ಯವಿದೆ. ಇದನ್ನು ಬಳಸಿ ನೋಂದಣಿ ಮಾಡಿಕೊಂಡು ತಾವು ಬೆಳೆದ ಹತ್ತಿಯನ್ನು ಸುಲಭವಾಗಿ ಮಾರಾಟ ಮಾಡಬಹುದಾಗಿದೆ. ನೋಂದಣಿ ಮಾಡಿದ ಬಳಿಕ ರೈತರು ತಮಗೆ ಹತ್ತಿರದ ಖರೀದಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ದಿನಾಂಕ ಮತ್ತು ಸಮಯವನ್ನು ಸಹ ರೈತರೇ ಬುಕ್ ಮಾಡಬೇಕು. ಇದರಿಂದಾಗಿ ಯಾವ ಖರೀದಿ ಕೇಂದ್ರಕ್ಕೆ, ಯಾವ ವೇಳೆಗೆ ಹೋಗಬೇಕು ಎಂಬುದು ತಿಳಿದು ರೈತರಿಗೆ ಅನುಕೂಲವಾಗಲಿದೆ.
ಪ್ರತಿ ದಿನ ಕನಿಷ್ಟ 15,000 ಕ್ವಿಂಟಲ್ ನಷ್ಟು ಹತ್ತಿ ಖರೀದಿ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಜಿಲ್ಲೆಯಾದ್ಯಂತ ಎಲ್ಲ ರೈತರು ಏಕಕಾಲಕ್ಕೆ ಹತ್ತಿ ಮಾರಾಟಕ್ಕೆ ತರಾತುರಿ ಮಾಡಿದ್ದರಿಂದಾಗಿ ಸ್ಲಾಟ್ ಬುಕ್ಕಿಂಗ್‌ನಲ್ಲಿ ತಾಂತ್ರಿಕ ಅಡಚಣೆ ಕಾಣಿಸಿತ್ತು. ಅದು ಈಗ ಸರಿಯಾಗಿದೆ. ಹಾಗಾಗಿ ರೈತರು ಯಾವುದೇ ಕಾರಣಕ್ಕೆ ಆತಂಕ ಪಡಬಾರದು. ಎಲ್ಲ ರೈತರಿಂದಲೂ ಹತ್ತಿ ಖರೀದಿ ಮಾಡಲಾಗುತ್ತಿದ್ದು, ರೈತರು ಅವಸರ ಮಾಡದೇ ನಿಧಾನಗತಿಯಲ್ಲಿ ಖರೀದಿ ಕೇಂದ್ರಕ್ಕೆ ಆಗಮಿಸಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ರೈತರಲ್ಲಿ ಮನವಿ ಮಾಡಿದರು.
ತೊಗರಿ ಕೇಂದ್ರ ತೆರೆಯಲು ಕ್ರಮ: ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ರೈತರಿಗೆ ಸ್ಪಂದಿಸಿ ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಅದೇ ರೀತಿ ಭತ್ತ ಮತ್ತು ಜೋಳದ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ. ರೈತರ ಬೇಡಿಕೆಯಂತೆ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರವನ್ನು ತೆರೆಯಲು ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, 15 ದಿನಗಳೊಳಗೆ ಮಂಜೂರಾತಿ ಸಿಗಬಹುದಾಗಿದೆ. ತೊಗರಿ ಬೆಳೆಗಾರರು ಸಹಕರಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಇದುವರೆಗೆ 22,000 ರೈತರಿಂದ ನೋಂದಣಿ: ರಾಯಚೂರು ಜಿಲ್ಲೆಯಲ್ಲಿ ಇದುವರೆಗೆ 22,000 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಕೃಷಿ ಇಲಾಖೆಯು 13,747 ಜನ ರೈತರಿಗೆ ಅನುಮೋದನೆ ನೀಡಿದೆ. ಇನ್ನುಳಿದ ರೈತರಿಗೆ ಅನುಮೋದನೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 35 ಕ್ವಿಂಟಲ್‌ನಷ್ಟು ಹತ್ತಿ ಖರೀದಿ ಮಾಡಲಾಗಿದೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಹತ್ತಿ ಖರೀದಿಗೆ ರೂ. 8,110 ನಿಗದಿ ಮಾಡಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ನಿರ್ದೇಶಕರಾದ ಬಿ ಕೃಷ್ಣ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ರೈತ ಸಂಘದ ಚಾಮರಾಜ ಪಾಟೀಲ ಸೇರಿದಂತೆ ಇನ್ನೀತರ ರೈತ ಮುಖಂಡರು, ರೈತರು, ಜಂಟಿ ಕೃಷಿ ನಿರ್ದೇಶಕರಾದ ಚವ್ಹಾಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *