ಕೊಪ್ಪಳ : ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ಜನರಿಗೆ ಆರೋಗ್ಯ ಸೇವೆ ನೀಡುವ ವಿಷಯದಲ್ಲಿ ಸಮಯಕ್ಕೆ ಮಹತ್ವ ನೀಡುವುದಕ್ಕಿಂತ ಮಾನವೀಯತೆಗೆ ಒತ್ತು ಕೊಟ್ಟುಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕಿಮ್ಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಇಲ್ಲಿನ ಜಿಲ್ಲಾ ಪಂಚಾಯಿತಿಯ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಸೋಮವಾರ ನಡೆದ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿನ ಅಸ್ವಚ್ಛತೆ ಬಗ್ಗೆ ದೀರ್ಘ ಚರ್ಚೆಯಾಯಿತು.

ಶಾಸಕ ಹಿಟ್ನಾಳ ಮಾತನಾಡಿ ಸ್ವಚ್ಛತೆ ನಿರ್ವಹಣೆಗೆ ಜಿಲ್ಲಾಸ್ಪತ್ರೆಗೆ ವಾರ್ಷಿಕ ₹3.5 ಕೋಟಿ ನೀಡಲಾಗುತ್ತಿದೆ. ಆದರೂ ಅಲ್ಲಿ ಕೊಳಕು ವಾತಾವರಣವಿದೆ. ಗಂಗಾವತಿ ತಾಲ್ಲೂಕು ಆಸ್ಪತ್ರೆಯಲ್ಲಿರುವ ಸ್ವಚ್ಛತೆ ಜಿಲ್ಲಾಕೇಂದ್ರದಲ್ಲಿ ಯಾಕಿಲ್ಲ ಎಂದು ಕಿಮ್ಸ್‌ ಅಧಿಕಾರಿಗಳಿಗೆ ಚಾಟಿ ಬೀಸಿದರು. ಔಷಧ ಖರೀದಿಗೂ ವರ್ಷಕ್ಕೆ ₹7.5 ಕೋಟಿ ಖರ್ಚು ಮಾಡಿದರೂ ಹೊರಗಡೆ ಔಷಧ ತರುವಂತೆ ಹೊರಗಡೆ ಬರೆದುಕೊಳ್ಳಲಾಗುತ್ತಿದೆ. ನಮ್ಮಲ್ಲಿ ಚಿಕಿತ್ಸೆಗೆ ಅವಕಾಶವಿದ್ದರೂ ಹುಬ್ಬಳ್ಳಿಗೆ ಯಾಕೆ ಕಳಿಸುವುದು ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ತಂಗಡಗಿ ‘ವೈದ್ಯರ ನಡುವೆ ಹೊಂದಾಣಿಕೆ ಇಲ್ಲ ಎನ್ನುವ ದೂರುಗಳು ವ್ಯಾಪಕವಾಗಿವೆ. ಎಲ್ಲದಕ್ಕೂ ಸರ್ಕಾರ ಹಣ ಕೊಡುತ್ತಿದ್ದರೂ ನಿಮ್ಮ‌ ಬೇಜವಾವ್ದಾರಿ ಜಾಸ್ತಿ ಆಗಿದೆ. ಇದೇ ರೀತಿ ಆದರೆ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಎಚ್ಚರಿಕೆ ನೀಡಿದರು. ಪರಸ್ಪರ ಸಂವಹನ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತದೆ. ಹೊಸ ಆಸ್ಪತ್ರೆಗೆ ಸ್ಥಳಾಂತರ ಮಾಡಿಕೊಳ್ಳಿ. ಆದಷ್ಟು ಬೇಗನೆ ಶಾಸಕ‌ ಹಾಗೂ ನಾನು ಭೇಟಿ ನೀಡುತ್ತೇವೆ ಎಂದರು. ಶಾಸಕ ದೊಡ್ಡನಗೌಡ ಪಾಟೀಲ ‘ಹಳ್ಳಿಗಳಿಂದ ಜನ ಬರುತ್ತಾರೆ‌. ಅವರಿಗೆ ಮಾನವೀಯತೆಯಿಂದ ಚಿಕಿತ್ಸೆ ನೋಡಿ’ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ‘ಸ್ವಚ್ಛತೆ ನಿರ್ವಹಣೆಗೆ ಯಂತ್ರಗಳನ್ನು ಖರೀದಿ ಮಾಡೋಣ. ಪ್ರಸ್ತಾವ ಕಳಿಸಿ’ ಎಂದು ಸೂಚಿಸಿದರು. ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ‘ಈ ವರ್ಷ ಎಂಬಿಬಿಎಸ್‌ ಸೀಟುಗಳನ್ನು 150ರಿಂದ 200 ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು, ಶಿಕ್ಷಣಕ್ಕೆ ರಾಜ್ಯಸರ್ಕಾರ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ವಿಶೇಷ ಅನುದಾನ ಒದಗಿಸಲಾಗಿದೆ. ಈ ಬಾರಿಯ ಫಲಿತಾಂಶ ಸುಧಾರಣೆಯಾಗಲೇಬೇಕು ಎಂದು ಸೂಚಿಸಿದರು. ಇದಕ್ಕಾಗಿ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಹೇಳಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳು ಜಿಲ್ಲೆಯ ಎಷ್ಟು ಬೇಕು ಎನ್ನುವುದರ ಬಗ್ಗೆ ಮಾಹಿತಿ ಒದಗಿಸಬೇಕು, ಹಾಸ್ಟೆಲ್‌ಗಳ ಊಟದ ಗುಣಮಟ್ಟದ ಕೊರತೆ ಬಗ್ಗೆಯೂ ಪರಾಮರ್ಶೆ ಮಾಡಬೇಕು, ಅಧಿಕಾರಿಗಳು ವಾರದಲ್ಲಿ ಎರಡ್ಮೂರು ದಿನ ಹಾಸ್ಟೆಲ್‌ನಲ್ಲಿ ಊಟ ಮಾಡಬೇಕು ಎಂದರು. ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ‘ಎಸ್‌.ಸಿ., ಎಸ್‌ಟಿ ಹಾಸ್ಟೆಲ್‌ಗಳಲ್ಲಿ ತಮ್ಮ ಅವಧಿ ಮುಗಿದರೂ ಅಲ್ಲಿಯೇ ಉಳಿದುಕೊಂಡಿದ್ದಾರೆ’ ಎಂದು ಗಮನಕ್ಕೆ ತಂದರು. ಇದರ ಬಗ್ಗೆ ನಿಗಾ ವಹಿಸುವಂತೆ ಸಚಿವರು ತಾಕೀತು ಮಾಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ. ನಿರ್ಮಲಾ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತ ಕುಮಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜನಾರ್ದನ ರೆಡ್ಡಿ ಶಾಸಕಆನೆಗೊಂದಿ ಪ್ರವಾಸಿ ತಾಣಗಳನ್ನು ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದೇಶ ಮತ್ತು ವಿದೇಶಿ ಪ್ರಾಸಿಗರು ಭೇಟಿ ನೀಡುತ್ತಾರೆ. ಭದ್ರತೆಯ ದೃಷ್ಟಿಯಿಂದ ಪೊಲೀಸ್ ಠಾಣೆ ನಿರ್ಮಾಣದ ಅತ್ಯವಶ್ಯಕತೆಯಿದೆ. ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವಆನೆಗೊಂದಿಯಲ್ಲಿ ಪೊಲೀಸ್ ಠಾಣೆ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗವುದು. ಈ ಕುರಿತು ಗೃಹ ಸಚಿವರ ಬಳಿ ಚರ್ಚಿಸಲಾಗುವುದು.
‘ಕೊಟ್ಟ ಮಾತಿನಂತೆ ಕ್ರೆಸ್ಟ್‌ಗೇಟ್‌ ನಿರ್ಮಾಣ’

ಕೊಪ್ಪಳ: ತುಂಗಭದ್ರಾ ಕ್ರೆಸ್ಟ್‌ಗೇಟ್‌ಗಳನ್ನು ಕೊಟ್ಟ ಮಾತಿನಂತೆ ಮೇ ತಿಂಗಳೊಳಗೆ ಅಳವಡಿಸುವ ಕಾರ್ಯ ಪೂರ್ಣಗೊಳಿಸುತ್ತೇವೆ. ಎರಡು ತಂಡಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ತಿಂಗಳಿನಿಂದ‌ ಮತ್ತೊಂದು ಹೆಚ್ಚುವರಿ ತಂಡ ನಿಯೋಜಿಸಲಾಗಿದೆ ಎಂದು ಸಚಿವ ತಂಗಡಗಿ ಹೇಳಿದರು. ‘ಕನಕಗಿರಿ ಆನೆಗೊಂದಿ ಉತ್ಸವಗಳ ಬಗ್ಗೆ ಕಾಳಜಿ ಇದೆ. ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದೇವೆ. ಕ್ಯಾಲೆಂಡರ್ ಆಫ್ ಇವೆಂಟ್ ಮಾಡಬೇಕೆಂದು ನನಗೂ ಆಸಕ್ತಿ ಇದೆ. ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆದು ಉತ್ಸವಕ್ಕೆ ದಿನಾಂಕ ನಿಗದಿ ಮಾಡುವೆ’ ಎಂದು ತಿಳಿಸಿದರು.

Leave a Reply

Your email address will not be published. Required fields are marked *