ವಿಶೇಷ ವರದಿ:
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ವಿವಿಧ ಕಾರಣಗಳಿಂದಾಗಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಧುನಿಕ ಜೀವನ ಶೈಲಿ ಸೇರಿದಂತೆ ಅನೇಕ ಕಾರಣಗಳಿಂದ ಆರೋಗ್ಯ ಸಮಸ್ಯೆಗಳು ಗಂಭೀರವಾಗುತ್ತಿವೆ. ಇನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಪ್ರಮುಖ ಕಾರಣವಾಗಿವೆ. ಆದರೆ ಹೆಚ್ಚಿನ ಜನರು ತಮಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದರೂ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ, ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಕರ್ನಾಟಕ ಘನ ಸರಕಾರವು ಆರೋಗ್ಯ ಇಲಾಖೆಯ ಮೂಲಕ ರಾಜ್ಯದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಗೃಹ ಆರೋಗ್ಯ ಯೋಜನೆಯಡಿ 14 ಆರೋಗ್ಯ ಸೇವೆಗಳನ್ನು ಗ್ರಾಮೀಣ ಭಾಗದ ಜನತೆಗೆ ಒದಗಿಸಿದ ನಂತರ ಸದರಿ ಸೇವೆಗಳ ಸದುಪಯೋಗದ ಮಹತ್ವನ್ನರಿತು ನಗರ ಪ್ರದೇಶದ ಆರ್ಥಿಕ ದುರ್ಬಲ ವರ್ಗದ ಜನತೆಗೂ ಸಹ ಶೀಘ್ರದಲ್ಲಿಯೇ ಯೋಜನೆಯನ್ನು ವಿಸ್ತರಿಸಿ ಸೌಲಭ್ಯ ಒದಗಿಸಲು ಸನ್ಮಾನ್ಯ ಮುಖ್ಯಮಂತ್ರಿಗಳು ರವರ ಆದೇಶದಂತೆ ರಾಜ್ಯ ಸರ್ಕಾರವು ಅಗತ್ಯ ಸಿದ್ಧತೆ ಕೈಗೊಂಡಿದೆ.
2024ರ ಅಕ್ಟೋಬರ್ 24ರಂದು ಯೋಜನೆಗೆ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ರಾಜ್ಯ ಸರ್ಕಾರವು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗಾಗಿ ಗೃಹ ಆರೋಗ್ಯ ಯೋಜನೆಯನ್ನು ಸರ್ಕಾರವು ನಂತರದಲ್ಲಿ ರಾಜ್ಯದಾದ್ಯಂತ ವಿಸ್ತರಿಸಿತು. ಯೋಜನೆಯ ವಿಸ್ತರಣೆಯಿಂದಾಗಿ ರಾಜ್ಯದ ಎಲ್ಲಾ ಜನರಿಗೆ ಯೋಜನೆಯ ಪ್ರಯೋಜನ ಲಭ್ಯವಾಯಿತು. ಅತಿ ಶೀಘ್ರದಲ್ಲಿ ನಗರದ ಪ್ರದೇಶದ ಆರ್ಥಿಕ ದುರ್ಬಲ ವರ್ಗದವರಿಗೂ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸಲಿದೆ. ಇದು ಕೇವಲ ರೋಗ ತಪಾಸಣೆಯಷ್ಟೇ ಅಲ್ಲದೇ ರೋಗ ಪೀಡಿತರಿಗೆ ಉಚಿತ ಔಷಧಿಗಳನ್ನು ಖಚಿತಪಡಿಸುತ್ತದೆ. ಈ ಯೋಜನೆಯಿಂದ ಏನೆಲ್ಲಾ ಸೌಲಭ್ಯಗಳಿವೆ? ಎಂಬುದನ್ನು ತಿಳಿಯೋಣ ಬನ್ನಿ.. ಯೋಜನೆಯ ಉದ್ದೇಶಗಳೇನು?
ಗೃಹ ಆರೋಗ್ಯ ಯೋಜನೆಯ ಮುಖ್ಯ ಉದ್ದೇಶವೆಂದರೆ ರೋಗಗಳನ್ನು ಶೀಘ್ರವಾಗಿ ಪತ್ತೆಹಚ್ಚುವುದು. ಇದು ಅಕಾಲಿಕ ಸಾವು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ತನ, ಗರ್ಭಕಂಠ ಮತ್ತು ಬಾಯಿಯ ಕ್ಯಾನ್ಸರ್ ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳನು (ಎನ್‌ಸಿಡಿ) ಹೆಚ್ಚಿನ ಚಿಕಿತ್ಸೆಗಾಗಿ ಪರೀಕ್ಷಿಸಲಾಗುತ್ತದೆ. ಈ ಯೋಜನೆಯು ಅಬ್ಟççಕ್ಟಿವ್ ಸ್ಲೀಪ್ ಅಪ್ನಿಯಾ (ಒಎಸ್‌ಒ) ಮತ್ತು ಇತರ ಮಾನಸಿಕ ಆರೋಗ್ಯ ಪರಿಸ್ಥಿತಿಗಳ ರೋಗಲಕ್ಷಣಗಳನ್ನು ಸಹ ಪರಿಶೀಲಿಸುತ್ತದೆ. ಅರ್ಹ ಪ್ರಕರಣಗಳಿಗೆ ಉಚಿತ ಔಷಧಿಗಳನ್ನು ಸಹ ಒದಗಿಸಲಾಗುವುದು.
ವರದಿಗಳ ಪ್ರಕಾರ ಒಟ್ಟು ಜನಸಂಖ್ಯೆಯ ಶೇ26.9 ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಲ್ಲದೆ ಶೇ.15.6 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದೆಲ್ಲವನ್ನು ಮನಗಂಡು ಕರ್ನಾಟಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ಈ ಸಂಖ್ಯೆಗಳನ್ನು ಕಡಿಮೆ ಮಾಡಲು ಮತ್ತು ಎಲ್ಲರನ್ನೂ ಆರೋಗ್ಯವಾಗಿಡಲು ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಗೃಹ ಆರೋಗ್ಯ ಯೋಜನೆಯ ಪ್ರಯೋಜನಗಳು ಏನು?: ಗೃಹ ಆರೋಗ್ಯ ಯೋಜನೆಯು ಕರ್ನಾಟಕದ ಎಲ್ಲಾ ಜನರಿಗೆ ಅವರ ಮನೆ ಬಾಗಿಲಲ್ಲೇ ಆರೋಗ್ಯ ತಪಾಸಣೆಯನ್ನು ಖಚಿತಪಡಿಸುತ್ತದೆ. ಗೃಹ ಆರೋಗ್ಯ ಯೋಜನೆಯು ರೋಗಗಳನ್ನು ಮೊದಲೇ ಪತ್ತೆಹಚ್ಚುವುದನ್ನು ಖಚಿತಪಡಿಸುತ್ತದೆ ಮತ್ತು ಗಮನಾರ್ಹ ಆರೋಗ್ಯ ಸಮಸ್ಯೆಗಳು ಮತ್ತು ಅಕಾಲಿಕ ಮರಣಗಳನ್ನು ತಡೆಗಟ್ಟುತ್ತದೆ. ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ನೀಡಲಾಗುವುದು, ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದವರ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಈ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದೆ. ರೋಗಗಳು ಪತ್ತೆಯಾದ ನಂತರ, ಜನರು ವಿಶೇಷ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಕಳುಹಿಸಿ ಕೊಡಲಾಗುವುದು.
ಗೃಹ ಆರೋಗ್ಯ ಯೋಜನೆಯ ಪ್ರಮುಖ ಅಂಶಗಳು: ಗೃಹ ಆರೋಗ್ಯ ಯೋಜನೆ, ಕರ್ನಾಟಕದ ಅತಿದೊಡ್ಡ ಆರೋಗ್ಯ ರಕ್ಷಣಾ ಉಪಕ್ರಮಗಳಲ್ಲಿ ಒಂದಾಗಿದ್ದು, ತನ್ನ ಎಲ್ಲಾ ನಾಗರಿಕರನ್ನು ಒಳಗೊಳ್ಳುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು 15ನೇಯ ಹಣಕಾಸು ಯೋಜನೆಯಡಿ ಅನುಷ್ಟಾನ ಮಾಡುತ್ತಿದ್ದು, ಯೋಜನೆಯಡಿ ಆರಂಭದಲ್ಲಿ ಜಿಲ್ಲೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ರಾಯಚೂರು, ಸಿಂಧನೂರು ನಗರ ವ್ಯಾಪ್ತಿಯ ಸುಮಾರು 1,04,342 ಜನರ ತಪಾಸಣೆ ಕೈಗೊಂಡು, ಅವರಲ್ಲಿ ಮೂವತ್ತು ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 41,757 ಜನರಿಗೆ ಸೇವೆ ಒದಗಸುವ ಗುರಿಯನ್ನು ಹೊಂದಿದೆ.
ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆರು ಪ್ರತಿದಿನ ಮನೆಗೆ ಭೇಟಿ ನೀಡಿ ನಿಗದಿತ ನಮೂನೆಯ ಪ್ರಶ್ನಾವಳಿಗಳ ಮೂಲಕ ರೋಗ ಸಮಸ್ಯೆ ಪತ್ತೆ ಹಚ್ಚಲು ಸಮಾಲೋಚನೆ ನಡೆಸಲಿದ್ದಾರೆ. ತದ ನಂತರ ಉಚಿತ ಆರೋಗ್ಯ ತಪಾಸಣೆ ಕೈಗೊಂಡು ಚಿಕಿತ್ಸೆಯ ಭಾಗವಾಗಿ ಉಚಿತ ಔಷಧಿಗಳನ್ನು ಸಹ ನೀಡಲಾಗುವುದು.
ಹೆಚ್ಚಿನ ಚಿಕಿತ್ಸೆ: ಆರೋಗ್ಯ ತಪಾಸಣೆಯ ಬಳಿಕ ರೋಗಿಗೆ ಚಿಕಿತ್ಸೆಯ ಅಗತ್ಯವಿದ್ದರೆ ಔಷಧಿ ವಿತರಣೆ ಮಾಡಲಾಗುವುದು, ಅಗತ್ಯವಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗುವುದು. ಹಿರಿಯ ನಾಗರಿಕರು, ಅಂಗವಿಕಲ ವ್ಯಕ್ತಿಗಳು ಮತ್ತು ಹೊರರೋಗಿಗಳ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹೊಂದಿರುವ ರೋಗಿಗಳನ್ನು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಕಳುಹಸಿ ಚಿಕಿತ್ಸೆ ಒದಗಿಸಲಾಗುತ್ತದೆ.
ಒಟ್ಟಾರೆಯಾಗಿ ಕರ್ನಾಟಕ ಸರಕಾರವು ನಿಮ್ಮ ಅರೋಗ್ಯ-ನಮ್ಮ ಆಧ್ಯತೆ ಎಂಬ ಧ್ಯೆಯದಂತೆ ಸಮುಯದಾಯದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಅರೋಗ್ಯ ಸೇವೆಗಳನ್ನು ನೀಡುವ ಜೊತೆಗೆ ಕುಟುಂಬವು ನೆಮ್ಮದಿಯ ಜೀವನ ಸಾಗಿಸಲು ದೃಡ ಹೆಜ್ಜೆಗಳನ್ನು ಇಟ್ಟಿದೆ.
– ಡಾ.ಸುರೇಂದ್ರ ಬಾಬು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ರಾಯಚೂರು.
– ಡಾ.ಚಂದ್ರಶೇಖರಯ್ಯ ಸ್ವಾಮಿ
ಆರೋಗ್ಯ ಇಲಾಖೆಯ ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿಗಳು, ರಾಯಚೂರು.

