ಮುದ್ದೇಬಿಹಾಳ: ದೇಶಸೇವೆಯ ಸಂಕಲ್ಪ ಮತ್ತು ಧೈರ್ಯದಿಂದ Border Security Force (ಬಿಎಸ್ಎಫ್)ಗೆ ಸೇರುವ ಕನಸನ್ನು ನನಸು ಮಾಡಿಕೊಂಡಿರುವ ಯುವತಿಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕಡುಬಡತನದ ಹಿನ್ನೆಲೆಯ ದಲಿತ ಕುಟುಂಬದ ಪುತ್ರಿಯಾಗಿರುವ ಕಾಶಿಬಾಯಿ ಚಲವಾದಿ ಅವರು ದೇಶ ಸೇವೆಗೆ ತಾವು ಸಿದ್ಧರಾಗಿರುವುದನ್ನು ಭಾವನಾತ್ಮಕವಾಗಿ ವ್ಯಕ್ತಪಡಿಸಿದರು.
ತಾಲೂಕಿನ ಮುದ್ದೇಬಿಹಾಳ ಪಟ್ಟಣದಲ್ಲಿ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, “ಭಾರತದ ಧ್ವಜ ಹಿಡಿದು ಶತ್ರು ಸಂಹಾರ ಮಾಡ್ತೀನಿ, ಇಲ್ಲಾಂದ್ರೆ ರಾಷ್ಟ್ರಧ್ವಜವನ್ನು ಮೈಮೇಲೆ ಹೊದ್ಕೊಂಡೇ ಮರಳಿ ಬರ್ತೀನಿ” ಎಂಬ ತಮ್ಮ ದೇಶಭಕ್ತಿಯ ಸಂಕಲ್ಪವನ್ನು ಹಂಚಿಕೊಂಡರು.
ತಾವು ಅತಿ ಹಿಂದುಳಿದ ದಲಿತ ಕುಟುಂಬದಲ್ಲಿ ಜನಿಸಿ, ಪ್ರಥಮ ತರಗತಿಯಿಂದ ಪದವಿ ಶಿಕ್ಷಣದವರೆಗೆ ಸರ್ಕಾರಿ ಶಾಲೆಗಳಲ್ಲೇ ಓದಿದ್ದಾಗಿ ಹೇಳಿದರು. ಕುಟುಂಬದವರು ಸರ್ಕಾರಿ ನೌಕರಿ ಮಾಡುವಂತೆ ಬಯಸಿದರೂ, ದೇಶಸೇವೆಯೇ ತಮ್ಮ ಜೀವನದ ಗುರಿಯಾಗಿದೆ ಎಂದು ಅವರು ತಿಳಿಸಿದರು. ಸೈನ್ಯಕ್ಕೆ ಸೇರುವ ನಿರ್ಧಾರ ತಿಳಿಸಿದಾಗ ತಾಯಿ ಆತಂಕ ವ್ಯಕ್ತಪಡಿಸಿದರೂ, ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ವಿಶ್ವಾಸವನ್ನು ನೀಡಿದ್ದಾಗಿ ಅವರು ಸ್ಮರಿಸಿದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ವೇದಮೂರ್ತಿ ಮಹಾದೇವಯ್ಯ ಶಾಸ್ತ್ರಿಗಳು, ಸೈನಿಕರು ತಮ್ಮ ವೈಯಕ್ತಿಕ ಬದುಕನ್ನು ತ್ಯಜಿಸಿ ದೇಶದ ಜನರ ಸುರಕ್ಷತೆಗೆ ಗಡಿಯಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ಹೇಳಿದರು. ಸೈನಿಕರ ಕುಟುಂಬ ಸದಸ್ಯರನ್ನು ಸಮಾಜ ಅತ್ಯಂತ ಗೌರವದಿಂದ ಕಾಣಬೇಕೆಂದು ಅವರು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಪುನೀತ ಹಿಪ್ಪರಗಿ ಮಾತನಾಡಿದರು. ಬಸವರಾಜ ನಂದಿಕೇಶ್ವರಮಠ, ಸಾಹಿತಿ ಶಿವಪುತ್ರ ಅಜಮನಿ, ಪತ್ರಕರ್ತ ಪರಶುರಾಮ ಕೊಣ್ಣೂರ ಹಾಗೂ ಮಾಜಿ ಸೈನಿಕ ರೇವಣೆಪ್ಪ ಹರಿಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕಾಂತ ಹಿರೇಮಠ ವಹಿಸಿದ್ದರು. ರಾಜು ಮ್ಯಾಗೇರಿ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಹಾಂತೇಶ ಬೂದಿಹಾಳಮಠ, ಚಂದ್ರು ಕಲಾಲ, ಶೇಖರ ಢವಳಗಿ, ರಾಜು ಬಳ್ಳೊಳ್ಳಿ, ಕಾಶಿನಾಥ ಹುಗ್ಗಿ, ಸಂತೋಷ ಬಾದರಬಂಡಿ, ವರ್ತಕರಾದ ಮಾಣಿಕಚಂದ ದಂಡಾವತಿ, ಹುಲ್ಲೂರು ಗ್ರಾಮದ ಭೀಮನಗೌಡ ಬಿರಾದಾರ, ನಬೀಸಾಬ ಕಂಬಾರ, ತಾಲೂಕು ಪಿಂಜಾರ ಸಮಾಜದ ಅಧ್ಯಕ್ಷ ಎಂ.ಡಿ. ನದಾಫ್ ಅಮರಗೋಳ, ಮುತ್ತು ಚಲವಾದಿ ಸೇರಿದಂತೆ ಕಾಶಿಬಾಯಿ ಚಲವಾದಿಯವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ದೇಶದ ಗಡಿಯನ್ನು ಕಾಯುವ ಸೌಭಾಗ್ಯ ಸಿಕ್ಕಿರುವುದಕ್ಕೆ ಇಡೀ ತಾಲೂಕು ಹೆಮ್ಮೆ ವ್ಯಕ್ತಪಡಿಸಿರುವುದು ತಮ್ಮಲ್ಲಿ ಹೊಸ ಉತ್ಸಾಹ ಮತ್ತು ಶಕ್ತಿ ತುಂಬಿದೆ ಎಂದು ಕಾಶಿಬಾಯಿ ಹೇಳಿದರು. ಯುವತಿಯೊಬ್ಬಳು ದೇಶರಕ್ಷಣೆಯ ಹೊಣೆ ಹೊರುವ ಸಂಕಲ್ಪ ವ್ಯಕ್ತಪಡಿಸಿರುವುದು ಸಮಾಜಕ್ಕೆ ಪ್ರೇರಣೆಯಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *