ಸೇನೆಗೆ ಸೇರುವ ಮನಃಸ್ಥಿತಿಯ ಯುವಕರ ಹಂಬಲ, ಸ್ಥೈರ್ಯಗಳಿಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜ. 30ರಿಂದ ಫೆ.11ರ ವರೆಗೆ ನಡೆದ ಅಗ್ನಿವೀರ್‌ಸೇನಾ ನೇಮಕಾತಿಗಾಗಿ ನಡೆದ ರ‍್ಯಾಲಿ ಸಾಕ್ಷಿಯಾಯಿತು. ಭಾರತೀಯ ಸೇನೆಯ ಅಗ್ನಿಪಥ ಯೋಜನೆಯಡಿ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರ ದಲ್ಲಿ ನಡೆದ ಈ ರ‍್ಯಾಲಿ ಸುಗಮ ನಿರ್ವಹಣೆ ಹಾಗೂ ವ್ಯವಸ್ಥಿತ ಯೋಜನೆ ಯೊಂದಿಗೆ ಯಶಸ್ವಿಯಾಗಿ ನಡೆದಿದೆ.ಅಭ್ಯರ್ಥಿಗಳ ದೈಹಿಕ ಪರೀಕ್ಷೆಗಳು ಫೆ. 8ರಂದು ಹಾಗೂ ವೈದ್ಯಕೀಯ ಪರೀಕ್ಷೆಗಳು ಫೆ. 11ರಂದು ಪೂರ್ಣಗೊಂಡಿದೆ. ವೈದ್ಯಕೀಯ ತಪಾಸಣೆಯಲ್ಲಿ ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಕೆಲವು ಅಭ್ಯರ್ಥಿಗಳನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 11 ಜಿಲ್ಲೆಗಳಿಂದ 8,500ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ವಿಜಯಪುರ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಅಭ್ಯರ್ಥಿಗಳು ಲಿಖೀತ ಪರೀಕ್ಷೆಯಲ್ಲಿ ಅರ್ಹತೆ ಪಡೆದು ರ‍್ಯಾಲಿಗೆ ಹಾಜರಾಗಿದ್ದರು. ಆಯ್ಕೆ ಪ್ರಕ್ರಿಯೆ ಲಿಖೀತ, ದೈಹಿಕ ಮತ್ತು ವೈದ್ಯಕೀಯ ಎಂಬ ಮೂರು ಹಂತಗಳಲ್ಲಿ ನಡೆದಿದ್ದು, ಪ್ರತಿ ಹಂತದಲ್ಲೂ ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಲಾಯಿತು.
ಆಳ್ವಾಸ್‌ನಿಂದ ವ್ಯವಸ್ಥಿತ ಸೇವೆ
ರ್ಯಾಲಿಗೆ ಆಗಮಿಸಿದ ಸಾವಿರಾರು ಅಭ್ಯರ್ಥಿಗಳಿಗೆ ಆಳ್ವಾಸ್ ಸಂಸ್ಥೆ ವಸತಿ, ಸ್ವತ್ಛ ಶೌಚಾಲಯ, ಗುಣಮಟ್ಟದ ಊಟೋಪಚಾರ ಹಾಗೂ ವೈದ್ಯಕೀಯ ನೆರವು ಒದಗಿಸಿದೆ. ರ್ಯಾಲಿ ನಿರ್ವಹಣೆಯಲ್ಲಿ ತೊಡಗಿದ್ದ ಸೇನಾ ಹಾಗೂ ಆಡಳಿತಾಧಿಕಾರಿಗಳಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಳ್ವಾಸ್‌ನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ತೊಡಗಿಸಿ ಕೊಂಡಿದ್ದು ರ್ಯಾಲಿಯ ಯಶಸ್ವಿಗೆ ಸಹಕರಿಸಿದ್ದರು.
“ಅಗ್ನಿವೀರ್ ರ‍್ಯಾಲಿ ಕೇವಲ ನೇಮಕಾತಿ ಪ್ರಕ್ರಿಯೆಯಲ್ಲ; ಯುವ ಮನಸ್ಸುಗಳಲ್ಲಿ ದೇಶಸೇವೆಯ ಉತ್ಸಾಹವನ್ನು ಮತ್ತಷ್ಟು ಗಟ್ಟಿಗೊಳಿಸಿದ ಮಹತ್ವದ ಅಧ್ಯಾಯವಾಗಿದೆ. ಆಡಳಿತ, ಸಂಘಟಿತ ವ್ಯವಸ್ಥೆ ಮತ್ತು ಸೇವಾಭಾವದ ಅಪರೂಪದ ಸಮನ್ವಯಕ್ಕೆ ರ್ಯಾಲಿ ಸಾಕ್ಷಿಯಾಗಿದೆ.ಈ ಮಹತ್ವದ ಕೆಲಸದಲ್ಲಿ ನಮ್ಮ ಸಂಸ್ಥೆಯು ಭಾಗಿಯಾಗಿರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ.

