ಮಾನ್ವಿ:
ಮಹಾಶಿವರಾತ್ರಿಯ ಗಾರಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ಮಾನ್ವಿ ನಗರದ ಕಲ್ಮಠದಲ್ಲಿ ಭಕ್ತಿಭಾವಭರಿತವಾಗಿ ವಿಶೇಷ ಸಮಾರಂಭ ಜರುಗಿತು. ಸಮಾಜಸೇವೆಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿರುವ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ “ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಾಭೂಷಣ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಹಾಗೂ ಸುಜಾತ ಹಿರೇಮಠ ದಂಪತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯೊಂದಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ವಿತರಿಸಿ ಅವರ ಸೇವೆಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವು ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು (ಮಾನ್ವಿ ಕಲ್ಮಠ), ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು (ಶ್ರೀ ಶಾಂಭವಿ ಸುಕ್ಷೇತ್ರ ನೀಲಗಲ್ ಗಣೇಕಲ್) ಕಲ್ಯಾಣ ಮಹಾಸ್ವಾಮಿಗಳು (ಕಲ್ಯಾಣ ಮಠ, ಬಳ್ಳಾರಿ ಕಮ್ಮರಚೇಡು), ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು (ಮಂಗಳವಾರಪೇಟೆ, ರಾಯಚೂರು) ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಅನುರಾಧ ಚಿಂತಕರು (ಬಳ್ಳಾರಿ), ದಲಿತ ಸಂಘರ್ಷ ಸಮಿತಿ ಮುಖಂಡ ಪ್ರಭುರಾಜ ಕೊಡ್ಲಿ (ಮಾನ್ವಿ) ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ (ಕರಡಕಲ್), “ನಮ್ಮ ಕಾರುಣ್ಯ ಸಂಸ್ಥೆಯ ಅನಾಥಪರ ಹಾಗೂ ವೃದ್ಧಪರ ಸೇವೆಯನ್ನು ಗುರುತಿಸಿ ಮಾನ್ವಿ ಕಲ್ಮಠದ ಪೂಜ್ಯ ಶ್ರೀಗಳು ‘ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಾಭೂಷಣ’ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿರುವುದು ನಮ್ಮ ಸೇವೆಗೆ ಮತ್ತಷ್ಟು ಬಲ ನೀಡಿದೆ. ಈ ಗೌರವ ನಮ್ಮ ಸಂಸ್ಥೆಗೆ ಸಹಾಯ ಮಾಡಿದ ಹಾಗೂ ಮುಂದೆಯೂ ಸಹಕಾರ ನೀಡುವ ಎಲ್ಲಾ ದಾನಿಗಳಿಗೆ ಸಮರ್ಪಿತವಾಗಿದೆ,” ಎಂದು ಹೇಳಿದರು.
ಈ ಗೌರವವು ಬಸವಾದಿ ಶರಣರ ಹರ-ಗುರು ಚರಮೂರ್ತಿಗಳ ಆಶೀರ್ವಾದದ ಫಲವೆಂದು ಅವರು ತಿಳಿಸಿದರು. ಕಾರುಣ್ಯ ಕುಟುಂಬದ ಪ್ರಾಮಾಣಿಕ ಸೇವೆಗೆ ಈ ಪ್ರಶಸ್ತಿ ಹೊಸ ಉತ್ತೇಜನ ನೀಡಿದ್ದು, ಇನ್ನಷ್ಟು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್‌ನ ಸಂಸ್ಥಾಪಕರಾದ ಅಶೋಕ ನಲ್ಲ ಅವರ ನಿರಂತರ ಸಹಕಾರ, ಹಾಗು ಸಿಂಧನೂರು ಮತ್ತು ರಾಯಚೂರು ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಬೆಂಬಲವೇ ಕಾರುಣ್ಯ ಕುಟುಂಬದ ಸೇವೆಗೆ ಮೂಲ ಶಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಮಾನ್ವಿ ಕಲ್ಮಠದ ಪೂಜ್ಯ ವಿರೂಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮಿಗಳಿಗೆ, ಗಾರಿಗೆ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳಿಗೆ, ಮಾನ್ವಿ ಕಲ್ಮಠದ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಅಪಾರ ಶಿಷ್ಯವೃಂದಕ್ಕೆ ಸಿಂಧನೂರಿನ ಕಾರುಣ್ಯ ಕುಟುಂಬದಿಂದ ಕೃತಜ್ಞತಾ ನಮನಗಳನ್ನು ಸಲ್ಲಿಸಲಾಯಿತು.
ಈ ಪ್ರಶಸ್ತಿ ಪ್ರದಾನವು ಸಮಾಜ ಸೇವೆಯ ಮಹತ್ವವನ್ನು ಮತ್ತೊಮ್ಮೆ ಸಾರಿದ್ದು, ಮಾನವೀಯ ಮೌಲ್ಯಗಳ ಉಳಿವು ಮತ್ತು ವೃದ್ಧಿಗೆ ಪ್ರೇರಣೆಯಾಗಿ ಪರಿಣಮಿಸಿತು.

