ಜಾಲಹಳ್ಳಿ : ಗ್ರಾಮದಲ್ಲಿ
ಇಂದು 15.02.2026, ರವಿವಾರ ಶ್ರೀ ಪರಮಪೂಜ್ಯ ಗವಿಸಿದ್ದೇಶ್ವರ ತಾತನವರ 31ನೇ ರಥೋತ್ಸವ ಜಾತ್ರಾ ಮಹೋತ್ಸವ ಹಾಗೂ ಮೂರನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗುತ್ತಿದೆ.

ಇಂದು ರಾಯಚೂರು ಜಿಲ್ಲೆಯ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಎಚ್. ಸಿದ್ದಾಪುರ–ಜಾಲಹಳ್ಳಿ ಗ್ರಾಮದಲ್ಲಿರುವ ಗವಿಸಿದ್ದೇಶ್ವರ ಮಠದಲ್ಲಿ ನಡೆಯುತ್ತಿರುವ ಈ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದಾರೆ. ಇಂದಿನಿಂದ ಪ್ರತಿದಿನ ರಾತ್ರಿ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ಫೆಬ್ರವರಿ 17ರಂದು ವಿವಿಧ ಕಾರ್ಯಕ್ರಮಗಳಾದ ಆಟ, ಕಬಡ್ಡಿ ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ ಎಂದು ತಾತನವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾದಾಸೋಹಿ ಪರಮಾತ್ಮ ತಾತನವರು, “ಸುಮಾರು 40 ವರ್ಷಗಳಿಂದ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ 30 ವರ್ಷಗಳಿಂದ ಪ್ರತಿದಿನ ಅನ್ನದಾಸೋಹ ನಡೆಸುತ್ತಾ ಬಂದಿದ್ದೇನೆ. ಬಡವರು, ದೀನ ದಲಿತರು ಯಾರೇ ಸಹಾಯ ಕೇಳಿದರೂ ನೆರವು ನೀಡುವುದು ನನ್ನ ಧರ್ಮ,” ಎಂದರು.

ಮುಖಂಡ ಚಂದಪ್ಪ ಬುದ್ದಿನ್ನಿ ಮಾತನಾಡಿ, “ರಸ್ತೆಯೇ ಇಲ್ಲದ ಸಮಯದಲ್ಲಿ ತಾತನವರು ಇಲ್ಲಿ ನೆಲೆಸಿ ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಉತ್ತಮ ರಸ್ತೆ, ಅನ್ನದಾಸೋಹ, ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸಿ ಗ್ರಾಮಕ್ಕೆ ಹೆಸರು ತಂದಿದ್ದಾರೆ,” ಎಂದು ಹೇಳಿದರು.

ಭೀಮಣ್ಣ ಗುಮ್ಮಿದಾರ್ ಮಾತನಾಡಿ, “31 ವರ್ಷಗಳಿಂದ ರಥೋತ್ಸವ ಹಾಗೂ ಮೂರನೇ ವರ್ಷದ ಲಕ್ಷ ದೀಪೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿರುವ ತಾತನವರ ಮಠಕ್ಕೆ ಸರ್ಕಾರದಿಂದ ಅನುದಾನ ನೀಡಬೇಕು. ಶಾಲೆ, ಕೋಣೆ ನಿರ್ಮಾಣ ಹಾಗೂ ಅನ್ನದಾಸೋಹಕ್ಕೆ ನೆರವು ನೀಡಬೇಕಾಗಿದೆ,” ಎಂದು ಒತ್ತಾಯಿಸಿದರು.

ಮಾನಪ್ಪ ಕವಲಿ ಹೊಸೂರು ಸಿದ್ದಾಪುರ ಮಾತನಾಡಿ, “ನೀರು ಇಲ್ಲದ ಸಮಯದಲ್ಲಿ ತಾತನವರು ಬಾವಿ ತೋರಿಸಿ ಸಾರ್ವಜನಿಕರಿಗೆ ನೀರಿನ ಸೌಲಭ್ಯ ಕಲ್ಪಿಸಿದರು. ಮಠದ ಸುತ್ತಮುತ್ತ ಪುರಾತನ ಕೋಟೆಯ ಅವಶೇಷಗಳಿವೆ,” ಎಂದು ತಿಳಿಸಿದರು.

ಶಿವನಗೌಡ ಜಾಲಹಳ್ಳಿ ಮಾತನಾಡಿ, “40 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಾತನವರಿಗೆ ಶಾಸಕರಾದ ಕರಿಯಮ್ಮ ನಾಯಕ್ ಅವರು ಎರಡು ಬೋರವೆಲ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ,” ಎಂದರು.

ತಾತಪ್ಪ ಪತ್ರಕರ್ತರು ಮಾತನಾಡಿ, “ಪ್ರತಿದಿನ ಮಠಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಪ್ರಮುಖ ಗವಿಸಿದ್ದೇಶ್ವರ ಮಠಗಳಲ್ಲಿ ಇದು ಒಂದು,” ಎಂದು ಹೇಳಿದರು.

ಮಹೇಂದ್ರ ಕುಮಾರ್ ಹಾಗೂ ಶಿವರಾಜ್ ಅವರು, “ಇಂದು ನಡೆಯುವ ರಥೋತ್ಸವ ಮತ್ತು ಲಕ್ಷ ದೀಪೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು,” ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಂದಪ್ಪ ಬುದ್ದಿನ್ನಿ, ಭೀಮಣ್ಣ ಗುಮ್ಮಿದಾರ್, ಮಾನಪ್ಪ ಕವಲಿ, ಮಹೇಂದ್ರ ಕುಮಾರ್, ಶಿವನಗೌಡ ಜಾಲಹಳ್ಳಿ, ಶಿವರಾಜ್, ಮಾನಪ್ಪ ಚಿಂಚೋಡಿ, ತಾತಪ್ಪ ಪತ್ರಕರ್ತರು, ಲಿಂಗಣ್ಣ ಮಕ್ಕಾಸಿ ನಾಯಕ್ ಸೇರಿದಂತೆ ಹೊಸೂರು ಸಿದ್ದಾಪುರ–ಜಾಲಹಳ್ಳಿ ಗ್ರಾಮದ ನೂರಾರು ಭಕ್ತರು ಹಾಜರಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ

Leave a Reply

Your email address will not be published. Required fields are marked *