ಕರ್ನಾಟಕದಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಜಿಡಿಸಿಆರ್‌ಐ)ಯ ಆಧುನೀಕರಣಕ್ಕಾಗಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಶಿಲಾನ್ಯಾಸ ನೆರವೇರಿಸಿದರು.
ರಾಜ್ಯ ಸರ್ಕಾರ 40 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ.

ಡಾ.ಶರಣಪ್ರಕಾಶ್ ಅವರು ಮಾತನಾಡಿ, “ಈ ಆಧುನೀಕರಣವು ಪ್ರತಿಷ್ಠಿತ ದಂತ ಕಾಲೇಜಿನ ಪರಂಪರೆಯನ್ನು ಮುಂದುವರಿಸುತ್ತಿದ್ದು, ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸುವುದು, ಕರ್ನಾಟಕದ ಎಲ್ಲಾ ನಾಗರಿಕರಿಗೆ ಉನ್ನತ ಮಟ್ಟದ ದಂತ ಆರೋಗ್ಯವನ್ನು ಒದಗಿಸುವುದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಇಂತಹ ಯೋಜನೆಗಳಿಗೆ ಹೂಡಿಕೆ ಮಾಡುವ ಮೂಲಕ, ವೈದ್ಯಕೀಯ ಶ್ರೇಷ್ಠತೆ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.

ಈ ಯೋಜನೆಯ ಅಡಿಯಲ್ಲಿ, ಸಾಂಪ್ರದಾಯಿಕ ಕಲ್ಲಿನ ವಾಸ್ತುಶಿಲ್ಪವನ್ನು ಸಂರಕ್ಷಿಸುವುದರ ಜೊತೆಗೆ ಐಷಾರಾಮಿ ಆಧುನಿಕ ಒಳಾಂಗಣ, ಕ್ಲಿನಿಕಲ್ ಕೊಠಡಿಗಳು ಮತ್ತು ಅತ್ಯಾಧುನಿಕ ಉಪಕರಣಗಳನ್ನು ಒದಗಿಸಲಾಗುವುದು. ಮೂರು ಅಂತಸ್ತಿನ ಕ್ಲಿನಿಕಲ್ ಸಂಕೀರ್ಣವನ್ನು ಮರು ಅಭಿವೃದ್ಧಿಪಡಿಸಿ, ವಿಶೇಷ ಚಿಕಿತ್ಸಾಲಯಗಳು ಮತ್ತು ಆರೋಗ್ಯ ಕ್ಲಬ್, ಚಾವಣಿಯ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನು ನಿರ್ಮಿಸಲಾಗುತ್ತದೆ ಎಂದರು.

ಈ ವೇಳೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಜಿಡಿಸಿಆರ್‌ಐ ನಿರ್ದೇಶಕ ಡಾ. ಗಿರೀಶ್ ಬಿ. ಗಿರಡ್ಡಿ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *