ಸಿರವಾರ : ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಬೆಂಕಿಗೆ ಪರಿವರ್ತಕಗಳು ಸಿಡಿದು ಗುರುವಾರ ಅಪಾರ ಪ್ರಮಾಣ ನಷ್ಟವುಂಟಾಗಿದೆ.
ರೈತರು ಜಮೀನುಗಳಲ್ಲಿ ಭತ್ತ ಕಟಾವು, ನಂತರ ಉಳಿದ ತ್ಯಾಜ್ಯ ಸುಡಲು ಗುರುವಾರ ಬೆಂಕಿ ಹಚ್ಚಲಾಗಿತ್ತು.
ಜಮೀನಿನ ಪಕ್ಕದಲ್ಲಿದ್ದ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರಕ್ಕೆ ಗಾಳಿಯಿಂದ ಬೆಂಕಿ ತಗುಲಿ ಆಯಿಲ್ ಬ್ಯಾರಲ್‌ಗಳು, ವಿದ್ಯುತ್ ಪರಿವರ್ತಕಗಳು ಸುಟ್ಟುಭಸ್ಮವಾಗಿ ₹ 3 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.
ಬೆಂಕಿ ತಗುಲಿದ ತಕ್ಷಣ ಕೇಂದ್ರದಲ್ಲಿದ್ದ ಕೆಲಸಗಾರರು ಪರಾರಿಯಾಗಿದ್ದು, ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅರಕೇರಾ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಅಗ್ನಿಶಾಮಕ ವಾಹನ ಮೀಸಲಿಗೆ ಒತ್ತಾಯ: ಬೇಸಿಗೆ ಪ್ರಾರಂಭವಾಗುತ್ತಿದ್ದು, ಬಿಸಿಲು ಸೇರಿದಂತೆ ಅಕಸ್ಮಿಕ ಬೆಂಕಿ ಅವಘಡಗಳು ಸಂಭವಿಸುವುದು ಸಾಮಾನ್ಯ. ಅದಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಂದು ಅಗ್ನಿ ಶಾಮಕ ವಾಹನ ಮತ್ತು ತಂಡವನ್ನು ಪಟ್ಟಣದಲ್ಲಿಯೇ ಮೀಸಲಿಟ್ಟರೆ, ತಕ್ಷಣಕ್ಕೆ ಅಗ್ನಿ ಅವಘಡ ನಡೆದಾಗ ಹೆಚ್ಚಿನ ಅನಾಹುತ ತಪ್ಪಿಸಲು ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

